ಮೂಡುಬಿದರೆ: ಮೂಲ್ಕಿ ಪಟ್ಟಣ ಪಂಚಾಯಿತಿ ಎಂಜಿನಿಯರ್ ಪದ್ಮನಾಭ ಅವರು ಕೆಲಸ ಮಾಡುತ್ತಿದ್ದ ಕಛೇರಿ ಮತ್ತು ಮೂಡುಬಿದರೆಯಲ್ಲಿರುವ ಬಾಡಿಗೆ ಮನೆಗೆ ಮಂಗಳವಾರ ಲೋಕಯುಕ್ತ ಪೋಲಿಸರು ದಾಳಿ ನಡೆಸಿದ ಬಳಿಕ ಆಸ್ತಿ ಮೌಲ್ಯವನ್ನು ಲೆಕ್ಕ ಹಾಕುವಾಗ ಅವರ ಸಂಬಂಧಿಕರ ಮನೆಯ ಮೌಲ್ಯವನ್ನು ಸೇರಿಸಿರುವುದಕ್ಕೆ ಮನೆಯವರಿಂದ ಆಕ್ಷೇಪ ವ್ಯಕ್ತವಾಗಿದೆ.
ಮನೆ ಮಾಲಕಿಯ ಪತಿ ರತ್ನಾಕರ ಪುತ್ರನ್ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು ವಿಶಾಲನಗರದಲ್ಲಿ ನಿರ್ಮಾಣವಾಗುತ್ತಿರುವ 32 ಲಕ್ಷ ವೆಚ್ಚದ ನನ್ನ ಮನೆಗೆ ಬ್ಯಾಂಕ್ನಿಂದ 25 ಲಕ್ಷ ಮತ್ತು ಇತರರಿಂದ 5 ಲಕ್ಷ ಕೈಸಾಲವಿದೆ. ಮನೆಗೆ ಭಾವ ಪದ್ಮನಾಭ ಹಣ ವಿನಿಯೋಗಿಸಿಲ್ಲ ಎಂದರು.
ನಾನು ವಿದೇಶದಲ್ಲಿದ್ದು ನನ್ನ ಪತ್ನಿ ಉಡುಪಿ ಕೊಕ್ಕರ್ಣೆ ಶಾಲೆಯಲ್ಲಿ ಶಿಕ್ಷಕಿ. ಈ ಕಾರಣಕ್ಕಾಗಿ ಮನೆ ನಿರ್ಮಾಣದ ಉಸ್ತುವಾರಿಯನ್ನು ನನ್ನ ಭಾವ ಪದ್ಮನಾಭ ಅವರು ನೋಡಿಕೊಳ್ಳುತ್ತಿದ್ದು ಮನೆಯ ದಾಖಲೆಯ ಒಂದು ಪ್ರತಿ ಅವರ ಬಳಿಯಿತ್ತು. ಭಾವನ ಬಾಡಿಗೆ ಮನೆಯಲ್ಲಿ ನನ್ನ ಮನೆಯ ದಾಖಲೆಗಳು ಸಿಕ್ಕಿದೆ ಎಂಬ ಕಾರಣಕ್ಕೆ ಲೋಕಾಯುಕ್ತ ಪೊಲೀಸರು ನನ್ನ ಮನೆಗು ದಾಳಿ ನಡೆಸಿ ಮನೆಯ ವೆಚ್ಚವನ್ನು ಭಾವನ ಆಸ್ತಿಗೆ ಸೇರಿಸಿ ಮೌಲ್ಯ ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು ರತ್ನಾಕರ ಪುತ್ರನ್ ಪತ್ರಿಕಾ ಹೇಳಿಕೆ0ುಲ್ಲಿ ತಿಳಿಸಿದ್ದಾರೆ
