ಮೂಡುಬಿದರೆ : ಮೂಡುಬಿದಿರೆ- ಕಾರ್ಕಳ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕು. ಆಲಂಗಾರಿನಿಂದ ಚಿಲಿಂಬಿ ಕ್ರಾಸ್ ವರೆಗೆ ರಸ್ತೆ ಚತುಷ್ಪಥಗೊಳಿಸಿ ಡಿವೈಡರನ್ನು ಅಳವಡಿಸಿ ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು, ಖಾಸಗಿ ಬಸ್ಸುಗಳ ಮಿತಿ ಮೀರಿದ ವೇಗದಿಂದಾಗಿ ಅಪಘಾತಗಳು ನಡೆಯುತ್ತಿದ್ದು ಅವುಗಳನ್ನು ತಡೆಯಲು ಮಂಗಳೂರು-ಕಾರ್ಕಳ ಮಧ್ಯೆ ಸರ್ಕಾರಿ ಬಸ್ಸಿನ ಸೌಲಭ್ಯವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದದ ವತಿಯಿಂದ ಮೂಡುಬಿದರೆ ಸಮೀಪದ ಆಲಂಗಾರಿನಲ್ಲಿ ಏ.27ರಂದು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದೆಂದು ಸಮಿತಿಯ ಸಂಚಾಲಕ ನೀಲಯ್ಯ ತಿಳಿಸಿದ್ದಾರೆ.
ಅವರು ಮೂಡುಬಿದರೆ ಪ್ರೆಸ್ಕ್ಲಬ್ನಲ್ಲಿ ಬುಧವಾರದಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಭಿವೃದ್ಧಿಯ ನಾಗಾಲೋಟದಲ್ಲಿರುವ ಮೂಡುಬಿದರೆಯು ಮೂಲಭೂತ ಸೌಕರ್ಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ. ಜನರು ತಮ್ಮ ಅನುಕೂಲತೆಗಳಿಗೆ ತಕ್ಕಂತೆ ವಾಹನಗಳನ್ನು ಖರೀದಿಸುತ್ತಿದ್ದಾರೆಯೆ ಹೊರತು ರಸ್ತೆಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸುತಿಲ್ಲ ರಸ್ತೆಗಳು ಕಿರಿದಾಗಿದ್ದು ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಆದ್ದರಿಂದಾಗಿ ವಾಹನ ದಟ್ಟಣೆಯ ಅನುಗುಣವಾಗಿ ರಸ್ತೆ ವಿಸ್ತರಣೆಯಾಗಬೇಕಾದ ತುರ್ತು ಅನಿವಾರ್ಯತೆಯಿದೆ. ಆದರೆ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಶಾಂತಿಯುತವಾಗಿ ರಸ್ತೆತಡೆ ಮತ್ತು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಘಟನಾ ಸಂಚಾಲಕ ಸದಾನಂದ ಪುಚ್ಚಮೊಗರು, ರಾಜೇಶ್ ಕಡಲಕೆರೆ ಉಪಸ್ಥಿತರಿದ್ದರು.
