ಕಲ್ಲಡ್ಕ: ಸಂಸ್ಕ್ರತ ಸಾಹಿತ್ಯ ಸಾಗರದಂತೆ. ಆಳಕ್ಕೆ ಇಳಿದಾಗ ಮುತ್ತು ರತ್ನಗಳಂತಿರುವ ಜ್ಞಾನ ಸಂಪತ್ತು ಲಭಿಸುತ್ತದೆ ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಸ್ಕ್ರತ ಭಾರತೀ ಕರ್ನಾಟಕ ಇದರ ವತಿಯಿಂದ ಏರ್ಪಡಿಸಲಾದ ಸಂಸ್ಕ್ರತ ಶಿಕ್ಷಕ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಂಸ್ಕ್ರತ ಕಠಿಣ ಭಾಷೆಯಲ್ಲ, ಎಲ್ಲರಿಗೂ ಕಲಿಯುವ ಅವಕಾಶ ಸಿಕ್ಕಿಲ್ಲ. ವೈದಿಕ ಸಾಹಿತ್ಯಗಳು ಕಾವ್ಯಗಳನ್ನು ಅಧ್ಯಯನ ಮಾಡಿದಾಗ ಸಂಸ್ಕ್ರತ ಜನಸಾಮಾನ್ಯರ ಭಾಷೆಯಾಗಿದ್ದು, ಕಾಲಕ್ರಮೇಣ ರಾಜಾಶ್ರಯವಿಲ್ಲದ ಕಾರಣ ಸಂಸ್ಕ್ರತಕ್ಕೆ ಹಿನ್ನಡೆಯಾಯಿತು. ಸಂಸ್ಕ್ರತ ಸಂಸ್ಕ್ರತಿಯ ಭಾಷೆಯಾಗಿದ್ದು ಎಲ್ಲರಿಗೂ ಕಲಿಯುವ ಅವಕಾಶ ಆಗಬೇಕು. ಶಿಕ್ಷಣದಲ್ಲಿಯೂ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಆಳ್ವಾಸ್ನಲ್ಲಿ ಸಂಸ್ಕ್ರತ ಅಧ್ಯಯನ ಕೇಂದ್ರ: ಆಳ್ವ
ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಸಂಸ್ಕ್ರತ ಅಧ್ಯಯನ ಕೇಂದ್ರವನ್ನು ತೆರೆಯಲಾಗುವುದು ಹಾಗೂ ಆಳ್ವಾಸ್ ನುಡಿಸಿರಿಯಲ್ಲಿಯೂ ಸಂಸ್ಕ್ರತ ಸಾಹಿತ್ಯ ಗೋಷ್ಠಿಗೆ ಅವಕಾಶ ನೀಡಲಾಗುವುದು ಎಂದು ಆಳ್ವಾಸ್ ಸಂಸ್ಥೆಯ ಡಾ| ಮೋಹನಆಳ್ವ ಶಿಬಿರವನ್ನು ಉದ್ಘಾಟಿಸಿ ಹೇಳಿದರು.

ಸಂಸ್ಕ್ರತ ಭಾರತದ ಭಾಷೆಗಳ ತಾಯಿ ಸ್ಥಾನದಲ್ಲಿದ್ದು ಸಂಸ್ಕ್ರತದ ಮೂಲಕ ಭಾರತದ ಜ್ಞಾನ ಪರಂಪರೆ ಬೆಳೆದುಬಂದಿದೆ. ಸಂಸ್ಕ್ರತವನ್ನು ಕೇವಲ ಭಾಷೆಯಾಗಿ ನೋಡದೆ ಜ್ಞಾನ, ಸಂಸ್ಕ್ರತಿಯಾಗಿ ಗಮನಿಸಬೇಕು. ಅಖಂಡ ಭಾರತವನ್ನು ಅರ್ಥ ಮಾಡಿಕೊಳ್ಳಲು, ಸಂಸ್ಕ್ರತಿಯ ಪುನರುಜ್ಜೀವನಕ್ಕೆ ಸಂಸ್ಕ್ರತ ಭಾಷೆಯನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ಡಾ| ಆಳ್ವರು ನುಡಿದರು. ಸಂಸ್ಕ್ರತ-ಸಂಸ್ಕ್ರತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾಷ್ಟ್ರಧ್ವಜ, ರಾಷ್ಟ್ರಗೀತೆಯಂತೆ ಸಂಸ್ಕ್ರತಕ್ಕೂ ಸ್ಥಾನ ನೀಡಬೇಕು. ಋಷಿ ಮುನಿಗಳ ತಪಸ್ಸು, ಹಿರಿಯರ ಹೋರಾಟದಿಂದ ಸಂಸ್ಕ್ರತ ಭಾಷೆ, ಸಾಹಿತ್ಯ ಬೆಳೆದಿದೆ. ಭಾಷೆಯನ್ನು ಕಟ್ಟಿ ಬೆಳೆಸದಿದ್ದರೆ ದೇಶ, ಸಂಸ್ಕ್ರತಿಯನ್ನು ಕಳೆದುಕೊಂಡಾತ್ತಾಗುತ್ತದೆ ಎಂದ ಅವರು ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಮನೋಭಾವ ಬಿಟ್ಟು ಮೌಲ್ಯಾಧಾರಿತ ಶಿಕ್ಷಣ ನೀಡುವ ಕಡೆಗೆ ಗಮನ ಹರಿಸಬೇಕು. ಕರ್ನಾಟಕದಲ್ಲಿ ಸಂಸ್ಕ್ರತ ವಿ.ವಿ. ಇದ್ದರೂ ಅದರ ಉಪಕುಲಪತಿ ನೇಮಕ ಮಾಡದೆ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ವಿಷಾದಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರಭಟ್ ಸ್ವಾಗತಿಸಿ, ಈ ದೇಶದ ಮೂಲ ಭಾಷೆ, ಮೂಲ ಸಂಸ್ಕ್ರತಿ ಉಳಿಯಬೇಕಾದರೆ ಸಂಸ್ಕ್ರತ ಭಾರತೀಯರೆಲ್ಲರ ಭಾಷೆಯಾಗಬೇಕು. 10 ದಿನಗಳ ಸಂಸ್ಕ್ರತ ಸಂಭಾಷಣ ಶಿಬಿರ ಅನಕ್ಷರಸ್ಥರಿಗೂ ಸಂಸ್ಕ್ರತ ಕಲಿಸುವ ಯೋಜನೆಯಾಗಿದೆ ಎಂದರು.
ಸಂಸ್ಕ್ರತ ಭಾರತಿ ಸಂಘಟನಾ ಮಂತ್ರಿ ಲಕ್ಷ್ಮೀನಾರಾಯಣ ಬೆಂಗಳೂರು ಪ್ರಸ್ತಾವನೆಗೈದರು. 1981ರಲ್ಲಿ ಆರಂಭಗೊಂಡ ಸಂಸ್ಕ್ರತ ಭಾರತಿ ದೇಶ, ವಿದೇಶಗಳಲ್ಲಿಯೂ ಸಂಸ್ಕøತ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಪುಷ್ಪರಾಜ ಜೈನ್ ಮಾತನಾಡಿ ಸಂಸ್ಕ್ರತ, ಸಂಸ್ಕ್ರತಿ ಉಳಿಸುವ ಕೆಲಸ ಸಂಸ್ಕ್ರತ ಶಿಕ್ಷಕರಿಂದ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು. ಆರಂಭದಲ್ಲಿ ಮೇಘಾಲಯದ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ವರ್ಗದ ಸಹಶಿಕ್ಷಣ ಪ್ರಮುಖ ಸಂತೋಷ ವಂದಿಸಿದರು. ಬೆಂಗಳೂರು ಮಹಾನಗರ ಸಂಪರ್ಕ ಪ್ರಮುಖ್ ಭಾಗ್ಯಲಕ್ಷ್ಮೀ ನಿರೂಪಿಸಿದರು.
ರಾಜಾದ್ಯಂತ ಸಂಸ್ಕ್ರತ ಶಿಕ್ಷಕರು ಭಾಗವಹಿಸಿದ್ದು ಪ್ರತಿದಿನ ಸಂಜೆ 4.00ರಿಂದ 6.00ರವರೆಗೆ ಆದರ್ಶ ಸಂಭಾಷಣ ಶಿಬಿರ ನಡೆಯುತ್ತಿದ್ದು ಆಸಕ್ತ ಸಾರ್ವಜನಿಕರು ಭಾಗವಹಿಸಬಹುದು ಎಂದು ಸಾವಿತ್ರಿ ಭಗಿನಿ ತಿಳಿಸಿದ್ದಾರೆ.
