ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಮತ್ತು ಬಿ.ಸಿರೋಡ್ ಪ್ರದೇಶದ ಅಸುಪಾಸಿನ ಕೆಲವು ಕಡೆ ಕುಡಿಯುವ ನೀರಿಲ್ಲದೆ ಪರದಾಡುವ ಅಘಾತಕಾರಿ ಸಂಗತಿಯೊಂದು ತಡವಾಗಿ ಬೆಲಕಿಗೆ ಬಂದಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಸ್ತಿಪಡ್ಪು ಹಾಗೂ ಕಂಚುಕಾರ ಪೇಟೆ ನಿತ್ಯಾನಂದ ನಗರ ಲೆಕೆಸಿರಿಪಾದೆ, ಬಂಟ್ವಾಳ ಕೆಳಗಿನಪೇಟೆ ಸೇರಿದಂತೆ ಬಿ.ಸಿರೋಡಿನ ಕೆಲವು ಪ್ರದೇಶದಲ್ಲಿ ನೀರಿನ ಸಮಸ್ಯೆ ಪ್ರಾರಂಬಗೊಂಡಿದೆ. ನೇತ್ರಾವತಿ ನದಿ ತಟದಲ್ಲೇ ಇರುವ ಈ ಪ್ರದೇಶಕ್ಕೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರೆ ಯಾರಾದರೂ ಸುಳ್ಳು ಎಂದು ಹೇಳಿಯಾರು. ಆದರೆ ವಾಸ್ತವತೆ ಅನುಭವಿಸಿದವರಿಗಷ್ಟೇ ಗೊತ್ತು. ಒಂದು ತಿಂಗಳಿನಿಂದ ಇಲ್ಲಿನ ಜನರಿಗೆ ಸದಸ್ಯರು ಸ್ವಂತ ಟ್ಯಾಂಕರ್ನಲ್ಲಿ ನೀರು ಸರಬರಾಜು ಮಾಡುತ್ತಿದ್ದಾರೆ. ಇತೀಚೆಗೆ ಜಿಲ್ಲಾಧಿಕಾರಿ ನಡೆಸಿದ ಸಭೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದು ಒಂದು ವೇಳೆ ಅಂತಹ ಸಮಸ್ಯೆಯಾದರೆ ಅಲ್ಲಿನ ಅಧಿಕಾರಿಗಳೇ ನೇರೆ ಹೊಣೆಯಾಗುತ್ತಾರೆ ಎಂದು ಹೇಳಿದ್ದರು . ಆದರೆ ಇಲ್ಲಿನ ಸಮಸ್ಯೆಯ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಸ್ಪಂದನೆ ನೀಡಿಲ್ಲ ಆರೋಪ ಮಾಡಿದರು.
ಕಳೆದ ಒಂದು ತಿಂಗಳಿನಿಂದ ಪೈಪ್ನಲ್ಲಿ ನೀರು ಬಾರದೆ ಜನತೆ ಕಂಗಾಲಾಗಿದ್ದಾರೆ. ಅನಿವಾರ್ಯವಾಗಿ ನದಿಯಿಂದ ನೀರು ಹೊತ್ತು ತರುತ್ತಿದ್ದಾರೆ. ಕುಡಿಯಲು ಅದೇ ಅಶುದ್ದ ನೀರನ್ನು ಬಳಸುತ್ತಿದ್ದಾರೆ. ವೃದ್ದರೂ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲರುವುದರಿಂದ ನದಿಗೆ ಹೋಗಿ ನೀರು ತರುವುದು ಅಪಾಯಕಾರಿ. ತಮ್ಮ ಈ ಸಮಸ್ಯೆಯನ್ನು ವಾರ್ಡ್ ಸದಸ್ಯರ ಗಮನಕ್ಕೆ ತಂದಿದ್ದು ಅವರು ಎರಡು ಬಾರಿ ಪುರಸಭಾ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾಧಿಕಾರಿಗೂ ಎರಡು ಬಾರಿ ದೂರು ನೀಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರೂ ಬಗೆಹರಿಸುವ ಭರವಸೆ ಸಿಕ್ಕಿದೆಯೇ ಹೊರತು ಇನ್ನೂ ಬಗೆಹರಿದಿಲ್ಲ. ಇದರಿಂದಾಗಿ ಕಳೆದ ಭಾನುವಾರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ.
ಈ ವಾರ್ಡ್ ನಲ್ಲಿ ಸುಮಾರು 30 ಕ್ಕಿಂತಲೂ ಅಧಿಕ ಮನೆಗಳಿದೆ. ನಿತ್ಯ ಬೆಳೆಗಾದರೆ ಸಾಕು ಪ್ರತಿ ಮನೆಯಿಂದ ಕೇಳಿ ಬರುವ ಸಮಸ್ಯೆ ಒಂದೇ. ಇದೀಗ ವಾರ್ಡ್ ಜನರ ದೂರಿನಿಂದ ಬೇಸತ್ತು ಹೋಗಿರುವ ಸದಸ್ಯ ಭಾಸ್ಕರ ಟೈಲರ್ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪಿಸಿ ಸಂಜೆಯೊಳಗೆ ಸಮಸ್ಯೆ ಬಗರಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ತಪ್ಪಿದ್ದಲ್ಲಿ ಧರಣಿ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

