ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಉಂಟಾಗುತ್ತಿರುವ ‘ಟ್ರಾಫಿಕ್ ಜ್ಯಾಂ’ ಸಮಸ್ಯೆಗೆ ಕೊನೆಗೂ ಮುಕ್ತಿ ನೀಡುವ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ಇಲ್ಲಿಗೆ ಮಂಜೂರಾದ ಹೊಸ ‘ಸಂಚಾರ ಪೊಲೀಸ್ ಠಾಣೆ’ ಮೆಲ್ಕಾರ್ನ ಬಾಡಿಗೆ ಕಟ್ಟಡವೊಂದರಲ್ಲಿ ಇದೇ 10ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.
ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಐದು ವರ್ಷಗಳ ಹಿಂದೆ ದುಬಾರಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡು ಪೂರ್ಣಗೊಳಿಸಿದ್ದರೂ ಮತ್ತಷ್ಟು ‘ಟ್ರಾಫಿಕ್ ಜ್ಯಾಂ’ ಸಮಸ್ಯೆ ಉಲ್ಬಣಗೊಂಡು ಇಲ್ಲಿನ ನಾಗರಿಕರು ಮತ್ತು ಪೊಲೀಸರು ಪದೇ ಪದೇ ಕಿರಿ ಕಿರಿ ಅನುಭವಿಸುತ್ತಿದ್ದರು.
ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಉತ್ಸುಕತೆಯಲ್ಲಿ ತಾಲ್ಲೂಕಿಗೆ ಹೊಸ ‘ಟ್ರಾಫಿಕ್ ಪೊಲೀಸ್ ಠಾಣೆ’ ಮಂಜೂರಾಗಿದ್ದು, ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬಾಡಿಗೆ ಕಟ್ಟಡವೊಂದರಲ್ಲಿ ಠಾಣೆ ಉದ್ಘಾಟನೆಗೆ ತರಾತುರಿಯಲ್ಲಿ ಭಾರೀ ಸಿದ್ಧತೆ ನಡೆದಿದೆ.

ಮಂಗಳೂರು-ಬೆಂಗಳೂರು ಸಂಪರ್ಕ ರಸ್ತೆ ಮಾತ್ರವಲ್ಲದೆ ಧರ್ಮಸ್ಥಳ, ಪುತ್ತೂರು, ಸುಬ್ರಹ್ಮಣ್ಯ, ಮೂಡುಬಿದ್ರೆ, ಕಾರ್ಕಳ, ಉಡುಪಿ, ವಾಮದಪದವು, ಮೂರ್ಜೆ , ನಾರಾವಿ, ವೇಣೂರು, ಸರಪಾಡಿ, ಅಜಿಲಮೊಗರು, ಪಾಣೆಮಂಗಳೂರು, ಸಜಿಪ, ಪಣೋಲಿಬೈಲು, ಮುಡಿಪು, ಕೊಣಾಜೆ ಸಂಪರ್ಕಿಸಲು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಗರಿಷ್ಟ ಸಂಖ್ಯೆಯಲ್ಲಿ ಸರ್ಕಾರಿ ಮತ್ತು ಖಾಸಗಿ ವಾಹನಗಳು ಓಡಾಡುತ್ತಿದೆ.
ಹಬ್ಬ ಹರಿದಿನ ಹಾಗೂ ವಿವಾಹ ಮತ್ತಿತರ ಶುಭ ಕಾರ್ಯಕ್ರಮಗಳಂದು ‘ಟ್ರಾಫಿಕ್ ಜ್ಯಾಂ’ ಸಮಸ್ಯೆ ಕಟ್ಟಿಟ್ಟ ಬುತ್ತಿಯಂತೆ ನಮ್ಮನ್ನು ಸತಾಯಿಸುತ್ತಿದೆ ಎನ್ನುತ್ತಾರೆ ಇಲ್ಲಿನ ಪೊಲೀಸರು. ಇಲ್ಲಿನ ಪಾದಚಾರಿಗಳಿಗೆ ಕೇವಲ ರಸ್ತೆ ದಾಟಲು ಬೇಕಿದ್ದ ಮೇಲ್ಸೇತುವೆಗೆ ಬದಲಾಗಿ ವಾಹನ ಓಡಾಟಕ್ಕೆ ಅವೈಜ್ಞಾನಿಕ ಮತ್ತು ಅನಗತ್ಯವಾಗಿ ನಿಮರ್ಾಣಗೊಂಡ ಮೇಲ್ಸೇತುವೆ ಉಪಕಾರಕ್ಕಿಂತ ಹೆಚ್ಚಾಗಿ ಉಪದ್ರವಾಗಿ ಪರಿಣಮಿಸಿದೆ ಎನ್ನುತ್ತಾರೆ ಸ್ಥಳೀಯ ವರ್ತಕರು.
ಬಿ.ಸಿ.ರೋಡ್ ಹೆದ್ದಾರಿಯಲ್ಲಿರುವ ಪ್ರಮುಖ ವೃತ್ತ ಕೂಡಾ ಅವೈಜ್ಞಾನಿಕವಾಗಿದ್ದು, ಒಂದೆಡೆ ಇದೇ ಪ್ರದೇಶದಲ್ಲಿ ಮೇಲ್ಸೇತುವೆ ಆರಂಭಿಕ ಭಾಗ ಹಾದು ಹೋಗಿದೆ. ಇನ್ನೊಂದೆಡೆ ರೈಲ್ವೆ ಮೇಲ್ಸೇತುವೆಯೂ ಇಲ್ಲಿದೆ. ಇತ್ತೀಚೆಗೆ ಹಲವು ಅಪಘಾತವೂ ಸಂಭವಿಸಿದ್ದು, ವಾಹನ ಸವಾರರು ಭಾರೀ ಆತಂಕಕ್ಕೀಡಾಗಿದ್ದರು.
ಈಗಾಗಲೇ ನಗರ ಪೊಲೀಸ್ ಠಾಣೆಯಲ್ಲಿರುವ ‘ಇಂಟರ್ಸೆಪ್ಟರ್’ ವಾಹನ ಮೂಲಕ ಪೊಲೀಸರು ಅಲ್ಲಲ್ಲಿ ವಾಹನ ತಪಾಸಣೆ ಮೂಲಕ ಕೈಬಿಸಿ ಮಾಡುತ್ತಿರುವ ಆರೋಪ ಒಂದೆಡೆಯಾದರೆ, ಇನ್ನೊಂದೆಡೆ ಟ್ರಾಫಿಕ್ ಪೊಲೀಸ್ ಠಾಣೆ ಮೂಲಕ ಈ ಪ್ರವೃತ್ತಿ ಮತ್ತಷ್ಟು ಹೆಚ್ಚಳವಾಗುವ ಭೀತಿಯೂ ವಾಹನ ಸವಾರರಲ್ಲಿ ಆವರಿಸಿದೆ.
ಇಲ್ಲಿನ ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣೆ ಸಹಿತ ಎಎಸ್ಪಿ ಕಚೇರಿಯಲ್ಲಿ ಈಗಾಗಲೇ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಇದೀಗ ಮಂಜೂರಾದ ಟ್ರಾಫಿಕ್ ಪೊಲೀಸ್ ಠಾಣೆಗೆ ಎಲ್ಲಿಂದ ಸಿಬ್ಬಂದಿ ಬರುತ್ತಾರೆ ಎಂಬ ಪ್ರಶ್ನೆ ಪೊಲೀಸರನ್ನು ಕಾಡತೊಡಗಿದೆ.
ಒಟ್ಟಿನಲ್ಲಿ ಇದೇ 10ರಂದು ಶುಕ್ರವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಟ್ರಾಫಿಕ್ ಪೊಲೀಸ್ ಠಾಣೆ ಉದ್ಘಾಟಿಸಲಿದ್ದು, ಆರೊಗ್ಯ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಎಸ್ಪಿ ಡಾ.ಶರಣಪ್ಪ, ಹೆಚ್ಚುವರಿ ಎಸ್ಪಿ ಎಂ.ಶೇಖರಪ್ಪ, ಎಎಸ್ಪಿ ರಾಹುಲ್ ಕುಮಾರ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ನಗರ ಠಾಣಾಧಿಕಾರಿ ನಂದಕುಮಾರ್ -ಮೋಹನ್ ಕೆ.ಶ್ರೀಯಾನ್
