ಉಳ್ಳಾಲ: ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟರ್ ಅಪಘಾತಕ್ಕೀಡಾಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ಅನ್ಸಾರ್ ನಗರ ಬಳಿ ಸಂಭವಿಸಿದೆ.
ಮೊಂಟೆಪದವು ನಿವಾಸಿಗಳಾದ ತಮೀಮ್(14) ಮತ್ತು ಝಾಕೀರ್ (14 )ಮೃತ ಬಾಲಕರು. ಇಬ್ಬರು ಅಲ್-ಮದೀನಾ ಮಂಜನಾಡಿ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ತಮೀಮ್ ಮೊಬೈಲ್ ರಿಚಾರ್ಜ್ ಮಾಡಲೆಂದು ತನ್ನ ತಂದೆ ಖಾಲಿದ್ ಅವರ ಆ್ಯಕ್ಟಿವಾ ಸ್ಕೂಟರಿನಲ್ಲಿ ತೌಡುಗೊಳಿ ಕ್ರಾಸ್ನ ಅಂಗಡಿಗೆ ಬಂದಾಗ ಅಂಗಡಿ ಮುಚ್ಚಿದ್ದರಿಂದ ಅನತಿ ದೂರದಲ್ಲಿರುವ ಮಂಜನಾಡಿಗೆ ರಿಚಾರ್ಜ್ ಮಾಡಲೆಂದು ಹೊರಟಿದ್ದರು.


ಅಲ್ಮದೀನಾ ಕಾಂಪ್ಲೆಕ್ಸ್ನ ಪಕ್ಕದ ತಿರುವಿನಲ್ಲಿ ಆ್ಯಕ್ಟಿವಾ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಅಪಘಾತದಿಂದ ತಮೀಮ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಗಂಭೀರ ಗಾಯಗೊಂಡಿರುವ ಝಾಕೀರ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೊಂಟೆಪದವಿನ ಕುಂಞಿಮೋನು ಝೌರಾ ದಂಪತಿ ಪುತ್ರ ಝಾಕೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

