ಮಲೇಷ್ಯಾ: ಮಲೇಷ್ಯಾ ಏರ್ ಲೈನ್ಸ್ ನ ಎಂಎಚ್370 ವಿಮಾನವು ನಾಪತ್ತೆಯಾಗಿ ಅರ್ಧ ತಿಂಗಳಾದರೂ ವಿಮಾನ ನಾಪತ್ತೆಯ ಹಿಂದೆ ಇರುವ ಕಾರಣಗಳ ಬಗ್ಗೆ ಅಧಿಕಾರಿಗಳಿಗೆ ಒಂದಿನಿತು ಸುಳಿವು ಕೂಡಾ ಸಿಕ್ಕಿಲ್ಲ. ದಕ್ಷಿಣ ಚೀನಾ ಸಾಗರ, ಹಿಂದೂ ಮಹಾಸಾಗರ ಎಲ್ಲವನ್ನೂ ಜಾಲಾಡಿದರೂ ವಿಮಾನದ ಒಂದು ತುಂಡು ಕೂಡಾ ಕೈಗೆ ಸಿಗದಿರುವುದು ಶೋಧಕಾರ್ಯದಲ್ಲಿ ತೊಡಗಿರುವ ದೇಶಗಳನ್ನು ಹತಾಶೆಗೊಳಿಸಿದೆ.
ಈ ಮಧ್ಯೆ ಬೋಯಿಂಗ್ 777ನ ಪೈಲಟ್ ಝಹರಿ ಅಹ್ಮದ್ ಶಾಗೆ ವಿಮಾನ ಟೇಕ್ ಆಫ್ ಆಗುವ ನಿಮಿಷಗಳ ಮೊದಲು ಮಹಿಳೆಯೊರ್ವಳಿಂದ ಕರೆ ಬಂದಿತ್ತು ಎಂಬ ಮಾಹಿತಿ ತನಿಖಾಧಿಕಾರಿಗಳ ಕೈಸೇರಿದೆ. ಶಾನ ಮೊಬೈಲ್ ಕರೆಗಳನ್ನು ಪರಿಶೀಲಿಸುತ್ತಿದ್ದ ಅಧಿಕಾರಿಗಳಿಗೆ ಆಗಂತುಕ ಮಹಿಳೆಯೊಬ್ಬಳು ಶಾಗೆ ಕರೆ ಮಾಡಿದ್ದು ಆಕೆಯ ಜೊತೆ ಶಾ 2 ನಿಮಿಷಗಳ ಕಾಲ ಮಾತನಾಡಿದ್ದ ೆಂಬ ಅಂಶ ಬೆಳಕಿಗೆ ಬಂದಿದೆ. ಈ ರಹಸ್ಯ ನಂಬರಿನ ಬೆಂಬತ್ತಿ ಹೋದ ಅಧಿಕಾರಿಗಳು ಕೌಲಲಾಂಪುರದಲ್ಲಿರುವ ಸಿಮ್ ಅಂಗಡಿಯಲ್ಲಿ ಈ ಬಗ್ಗೆ ವಿಚಾರಿಸಿದ್ದು, ಸಿಮ್ ಅನ್ನು ನಕಲಿ ವಿಳಾಸ ಹಾಗೂ ಹೆಸರು ನೀಡಿ ಖರೀದಿಸಿರುವ ಮಾಹಿತಿ ಲಭಿಸಿದೆ. ಅಷ್ಟಕ್ಕೂ ಆ ಮಹಿಳೆ ಯಾರು ಎಂಬ ಕುರಿತು ಈಗ ತನಿಖೆ ಆರಂಭವಾಗಿದೆ. ಎಫ್ ಬಿಐ ತಂಡ ಶಾನ ಪತ್ನಿಯನ್ನು ಈ ಸಂಬಂಧ ವಿಚಾರಣೆಗೆ ಒಳಪಡಿಸುವ ಚಿಂತನೆ ನಡೆಸುತ್ತಿದೆ. ನಾಪತ್ತೆಯಾದ ವಿಮಾನದ ಪೈಲಟ್ ಆಗಿದ್ದ ಶಾನ ಮನಃಸ್ಥಿತಿಯನ್ನು ಆತನ ಪತ್ನಿಗಿಂತ ಹೆಚ್ಚು ತಿಳಿದವರು ಯಾರೂ ಇರಲಾರರು ಎಂದು ಎಫ್ ಬಿಐ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

