ಸುದ್ದಿ9ಬಂಟ್ವಾಳ: ಬಂಟ್ವಾಳದಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಕಾಂಗ್ರೇಸ್ಸಿಗರು ಕಾಂಗ್ರೇಸ್ ಸಮಾವೇಷದಂತೆ ನಡೆಸಿ ಪ್ರಚಾರ ಗಿಟ್ಟಿಸಿದ್ದಾರೆ. ನಾಗರಾಜ ಶೆಟ್ಟಿ ಸಚಿವರಾಗಿದ್ದಾಗ ಮಂಜೂರಾತಿಗೊಂಡ ಪಾಲಿಟೆಕ್ನಿಕ್ ಕಟ್ಟಡ, ವಿದ್ಯಾರ್ಥಿ ನಿಲಯ ಕಟ್ಟಡವನ್ನು ಕಾಂಗ್ರೇಸ್ಸಿಗರನ್ನೇ ಸೇರಿಸಿಕೊಂಡು ಉದ್ಘಾಟಿಸುವ ಮೂಲಕ ಅಭಿವೃದ್ಧಿ ಕಾರ್ಯದಲ್ಲೂ ರಾಜಕಾರಣ ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಸೋಮವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದ ಯೋಜನೆಯಾದರೂ ಕೇಂದ್ರದ ಸಚಿವರು, ವಿಧಾನ ಪರಿಷತ್ತು ಸದಸ್ಯರು, ಜಿಲ್ಲಾ ಪಂಚಾಯತು ಅಧ್ಯಕ್ಷರನ್ನೂ ಆಹ್ವಾನಿಸದೇ ಶಿಷ್ಠಾಚಾರ ಉಲ್ಲಂಘಿಸಿರುವುದು ಉಸ್ತುವಾರಿ ಸಚಿವರಿಗೆ ಶೋಭೆಯಲ್ಲ. ಜನರಿಗೆ ತೊಂದರೆಯಾಗಬಾರದೆಂಬ ದೃಷ್ಠಿಯಿಂದ ಬಿಜೆಪಿ ಇದನ್ನು ಪ್ರತಿಭಟಿಸಿಲ್ಲ. ಕಾಂಗ್ರೇಸ್ ಇದೇ ರೀತಿಯ ಚಾಲಿಯನ್ನು ಮತ್ತೆ ಮುಂದುವರಿಸಿದರೆ ಅಲ್ಲೇ ಪ್ರತಿಭಟನೆ ನಡೆಸಿ ಕಾರ್ಯಕ್ರಮವನ್ನು ರದ್ದು ಪಡಿಸಲಾಗುವುದು ಎಂದು ನಳಿನ್ ಎಚ್ಚರಿಸಿದರು.

ರಾಜ್ಯದ ಕಾಂಗ್ರೇಸ್ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯರು ಸರಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದು ರಾಜ್ಯವನ್ನು ಕಾಂಗ್ರೇಸ್ನಿಂದ ಮುಕ್ತಗೊಳಿಸಲು ಜನತೆ ತೀರ್ಮಾನಿಸಿದ್ದಾರೆ. ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಲೆ, ಆತ್ಮಹತ್ಯೆ, ಹಲ್ಲೆ, ಕೋಮುಗಲಭೆಗಳಂತಹ ಪ್ರಕರಣಗಳು ಮೀತಿ ಮೀರಿದ್ದರೂ ಯಾವುದೇ ಕ್ರಮಕೈಗೊಳ್ಳುವಲ್ಲಿ ಸರಕಾರ ವೈಫಲ್ಯವನ್ನು ಕಂಡಿದೆ. ಪ್ರತಿ ಪ್ರಕರಣಗಳನ್ನು ಮುಚ್ಚಿಟ್ಟು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.
ಬಿಜೆಪಿಯ ಸಾಧನೆಗಳೇ ಕಾಂಗ್ರೇಸ್ಗೆ ಆಸ್ತಿ:
ಕಾಂಗ್ರೇಸ್ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಅನುಷ್ಠಾನಗೊಂಡ ಯೋಜನೆಗಳನ್ನೇ ಕಾಂಗ್ರೇಸ್ ತಮ್ಮ ಸಾಧನೆಯೆಂದು ಪ್ರಚಾರಗಿಟ್ಟಿಸುತ್ತಿದೆ. ಜಿಲ್ಲೆಗೆ ಕಾಂಗ್ರೇಸ್ ಏನು ಕೊಟ್ಟಿದೆ ಎಂದು ಕಾಂಗ್ರೇಸ್ಸಿಗರು ಬಹಿರಂಗ ಪಡಿಸಲಿ ಎಂದ ಅವರು ಮಂಗಳೂರು ಮಹಾನಗರ ಪಾಲಿಕೆಗೆ ಬಿಜೆಪಿ ಸರಕಾರ ಮುನ್ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ತುಂಬೆ ವೆಂಟೆಡ್ ಡ್ಯಾಂ ನಿರ್ಮಾಣವೂ ಇದರಲ್ಲಿ ಸೇರಿತ್ತು. ಆದರೆ ಇದನ್ನು ಕಾಂಗ್ರೇಸ್ ತನ್ನದೆಂದು ಹೇಳುತ್ತಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಅಧಿಕಾರಿಗಳನ್ನೂ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯನ್ನು ಉಸ್ತುವಾರಿ ಸಚಿವರು ನಿಭಾಯಿಸುವ ಬದಲಾಗಿ ಅಧಿಕಾರಿಗಳೇ ನಿಯಂತ್ರಿಸುತ್ತಿದ್ದಾರೆ ಎಂದು ಟೀಕಿಸಿದರು.
ರವಿ ಪ್ರಕರಣ ಸಿಬಿಐಗೆ ಒಪ್ಪಿಸಿ:
ರಾಜ್ಯದ ದಕ್ಷ ಅಧಿಕಾರಿ ರವಿ ಅವರ ಅಸಹಜ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕಾಂಗ್ರೇಸ್ ನಾಯಕರ ಸಹಿತ ರಾಜ್ಯದ್ಯಾಂತ ಒತ್ತಡ ಬರುತ್ತಿದ್ದರೂ ಮುಖ್ಯ ಮಂತ್ರಿಯವರು ಯಾಕೆ ಮೀನ ಮೇಷ ಎಣಿಸುತ್ತಿದ್ದಾರೆ, ಯಾರನ್ನು ರಕ್ಷಿಸುವ ಇರಾದೆಯಲ್ಲಿದ್ದಾರೆಂದು ಗೊತ್ತಾಗುತ್ತಿಲ್ಲ ಎಂದ ಅವರು ರವಿ ಪ್ರಕರಣ ತಕ್ಷಣ ಸಿಬಿಐಗೆ ಒಪ್ಪಿಸಬೇಕು, ರವಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಇದಕ್ಕಾಗಿ ಬಿಜೆಪಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಹೋರಾಟ ರೂಪಿಸಲಿದೆ ಎಂದರು.
ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ಎ.ರುಕ್ಮಯ ಪೂಜಾರಿ, ಬಿಜೆಪಿ ನಾಯಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಸುಲೋಚನಾ ಜಿ.ಕೆ.ಭಟ್, ಜಿ.ಆನಂದ, ರಾಮದಾಸ ಬಂಟ್ವಾಳ, ದಿನೇಶ್ ಅಮ್ಟೂರು ಸುದ್ದಿಗೋಷ್ಟಿಯಲ್ಲಿದ್ದರು.
