ಉಳ್ಳಾಲ: ಪ್ರಾಮಾಣಿಕ ಐ.ಎ.ಎಸ್ ಅಧಿಕಾರಿ ಡಿ.ಕೆ. ರವಿಯವರ ನಿಗೂಢ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಆಶ್ರಯದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ಕಾಲೇಜು ಕ್ಯಾಂಪಸ್ಸಿನಲ್ಲಿ ನಡೆಯಿತು.
ಕ್ಯಾಂಪಸ್ಸಿನ ಮಂಗಳಾ ಆಡಿಟೋರಿಯಂನಿಂದ ವಿ.ವಿ.ಯ ಮುಖ್ಯದ್ವಾರದವರೆಗೆ ಪ್ರತಿಭಟನಾ ಜಾಥಾ ನಡೆಯಿತು.
ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣ ಸಿಓಡಿ ಅಥವಾ ಸಿಐಡಿಗೆ ನೀಡುವುದು ಮುಖ್ಯವಲ್ಲ, ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಮುಖ್ಯವಾಗಿದೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿ ಪೊಲೀಸರು ಸುಳ್ಳು ವರದಿ ನೀಡುತ್ತಾರೆನ್ನುವ ಭಯ ವಿರೋಧ ಪಕ್ಷಗಳಿಗಿದ್ದರೆ, ಸಿಬಿಐ ರಾಜ್ಯ ಸರ್ಕಾರದ ವಿರುದ್ಧ ವರದಿಯನ್ನು ನೀಡುತ್ತಾರೆನ್ನುವ ಭಯ ರಾಜ್ಯದ ಜನಪ್ರತಿನಿಧಿಗಳಲ್ಲಿದೆ. ಆದರೆ ರಾಜ್ಯದ ಜನತೆಗೆ ಹಾಗೂ ರವಿ ಕುಟುಂಬಕ್ಕೆ ಬೇಕಾಗಿರುವುದು ನ್ಯಾಯ. ಸದ್ಯ ಆತ್ಮಹತ್ಯೆ ಎನ್ನುವ ವರದಿಯನ್ನು ರಾಜ್ಯ ಸರ್ಕಾರ ಜನರ ಮುಂದಿಟ್ಟಿದೆ. ಆದರೆ ಕಠಿಣ ನಿರ್ಧಾರಗಳನ್ನು ಎದುರಿಸಿ ಐಎಎಸ್ ಅಧಿಕಾರಿಯಾಗಿರುವ ರವಿ ಅಂತಹ ಕೃತ್ಯ ಎಸಗುವುದು ಅಸಾಧ್ಯ.


`ಮಾರ್ಚ್ ತಿಂಗಳಲ್ಲಿ ಭೇಟಿಯಾಗಿದ್ದೆ’: ಕೋಲಾರದಲ್ಲಿ ಜನಸಾಮಾನ್ಯರ ಜತೆಗೆ ಜಾತ್ರೆಯಲ್ಲಿ ಕುಣಿಯುತ್ತಾ, ದಲಿತರು ಎಲ್ಲಾ ದೇವಸ್ಥಾನಗಳನ್ನು ಪ್ರವೇಶಿಸಲು ಬಿಡುವಂತೆ ಆದೇಶ ಹೊರಡಿಸಿದ್ದ ಡಿ.ಕೆ .ರವಿಯವರ ಕಾರ್ಯವೈಖರಿಯನ್ನು ಕಂಡು ಮಾರ್ಚ್ ತಿಂಗಳಿನಲ್ಲಿ ಭೇಟಿಯಾಗಿದ್ದೆ. ಉನ್ನತ ಹುದ್ದೆ ಪರೀಕ್ಷೆ ಬರೆಯುವ ಮಾರ್ಗದರ್ಶನ ಪಡೆಯಲು ಅವರ ಬಳಿ ತೆರಳಿದ್ದೆ. ಜಿಲ್ಲಾಧಿಕಾರಿಯ ಯಾವಗತ್ತೂ ಇಲ್ಲದೆ, ಸಾಮಾನ್ಯ ಅಧಿಕಾರಿಯಂತೆ ಸ್ವಾಗತಿಸಿ ಮಾತುಕತೆ ನಡೆಸಿ, ಮಾರ್ಗದರ್ಶನವನ್ನು ನೀಡಿದ್ದರು ಎಂದು ವಿದ್ಯಾರ್ಥಿ ಹರೀಶ್ ತಿಳಿಸಿದರು.
ಐಎಎಸ್ ಅಧಿಕಾರಿ ಮಹಾಂತೇಶ್ ವಿಚಾರದಲ್ಲಿಯೂ ಅವರಿಗೆ ಬೆದರಿಕೆ ಹಾಕಿದವರನ್ನು ವಿಚಾರಿಸುವ ಬದಲು ಪೊಲೀಸರು ಪದೇಪದೇ ಮಹಾಂತೇಶ್ ಅವರನ್ನೇ ವಿಚಾರಿಸುತ್ತಾ ಅವರ ವ್ಯಕ್ತಿತ್ವವನ್ನು ಪ್ರಶ್ನಿಸುವ ಹಂತಕ್ಕೆ ತಂದಿದ್ದರು. ಅಂದು ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿದ್ದಲ್ಲಿ ಇಂದು ಡಿ.ಕೆ. ರವಿ ಅವರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಮುಂದೆ ಅಧಿಕಾರಿಯ ಸಾವಿಗೆ ನ್ಯಾಯ ಸಿಗದೇ ಇದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.
ರಾಜ್ಯ ಐಎಎಸ್ ಅಧಿಕಾರಿ ರವಿ ಅವರನ್ನು ಕಳೆದುಕೊಳ್ಳುವ ಮೂಲಕ ಪ್ರಾಮಾಣಿಕವನ್ನು ಕಳೆದುಕೊಂಡಿದೆ. ಬಡ ಕುಟುಂಬದ ರವಿ ಸಾವಿಗೆ ನ್ಯಾಯ ಸಿಗಬೇಕು. ಐಎಎಸ್ ಅಧಿಕಾರಿಗಳು ಯಾವುದೇ ಭೀತಿಯಿಲ್ಲದೆ ಕರ್ತವ್ಯ ನಿರ್ವಹಿಸುವಂತಾಗಬೇಕು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎಂದು ವಿದ್ಯಾರ್ಥಿನಿ ರಚನಾ ಹೇಳಿದರು.
ಈ ಸಂದರ್ಭ ವಿದ್ಯಾರ್ಥಿ ನಾಯಕರಾದ ಸೋಮಣ್ಣ, ಅನಿಲ್, ರಾಜಶೇಖರ್, ರವಿರಾಜ್, ಲೋಕೇಶ, ರವಿ, ಮುರಳಿ, ನಿರಂಜನ್ ಮೊದಲಾದವರು ಇದ್ದರು.




