ಸುದ್ದಿ9 ಕೈಕಂಬ: ಬಂಟ್ವಾಳದ ಕಲ್ಪನೆ ಎಂಬಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ನಡೆಸಿದ್ದು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಇಂದು(ಮಾ.21) ಬೆಳಗ್ಗಿನ ಜಾವ ಕಲ್ಪನೆಯ ರಿಕ್ಷಾ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಕೊಲೆಗೀಡಾದ ವ್ಯಕ್ತಿಯನ್ನು ಬೆಂಜನಪದವು ನವ ಗ್ರಾಮದ ರಾಜೇಶ್(35) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಇಂದು ಬೆಳಗ್ಗಿನ ಜಾವ ಸ್ವಲ್ಪ ಬೇಗ ರಿಕ್ಷಾ ಪಾರ್ಕಿಗೆ ಬಂದ ರಾಜೇಶ್ ನನ್ಉ ಹೊಂಚು ಹಾಕಿ ಕುಳಿತುಕೊಂಡಿದ್ದ ಹಂತಕರು ಬೈಕಿನಿಂದ ಬಂದು ರಾಜೇಶ್ ಹಿಂಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆ ನಡೆಸಿ ಪರಾರಿಯಾಗಿದ್ದರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಪಕ್ಷಿ ಹಾರಿಹೋಗಿದೆ ಎನ್ನಲಾಗಿದೆ. ಸುಮಾರು ಐದು ವರ್ಷಗಳ ಹಿಂದೆ ಬಂಟ್ವಾಳ ಕೆಳಗಿನಬೈಲು ನಿವಾಸಿ, ಕೆಎಫ್ ಡಿ ಕಾರ್ಯಕರ್ತ ಇಕ್ಬಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ರಾಜೇಶ್ ನನ್ನು ಗುರುತಿಸಲಾಗಿದೆ. ಈ ಹಿಂದೆಯೂ ಎರಡು ಬಾರಿ ಅವರ ಹತ್ಯಾಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈತ ಕೆಲ ವರ್ಷಗಳಿಂದ ಸಂಘಟನೆಯಿಂದ ದೂರ ಉಳಿದಿದ್ದ. ರಿಕ್ಷಾ ಚಾಲಕ, ಬಸ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಇಬ್ಬರು ಮಕ್ಕಳನ್ನು ಹೊಂದಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

