ಬೆಂಗಳೂರು: ಕೇಂದ್ರ ಸರಕಾರ ಬೀಡಿ, ಸಿಗರೇಟ್, ತಂಬಾಕು ತೆರಿಗೆಯನ್ನು ಹೆಚ್ಚಿಸಿದಂತೆ ರಾಜ್ಯ ಸರಕಾರವೂ ಅದೇ ಹಾದಿಯನ್ನು ತುಳಿದಿದೆ. ಬೀಡಿ, ಸಿಗರೇಟು, ಗುಟ್ಕಾ ಮತ್ತಿತರ ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ 17 ರಿಂದ ಶೇ 20 ಕ್ಕೆ ಹೆಚ್ಚಿಸಲಾಗಿದೆ.
ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ 1 ರಷ್ಟು ಹೆಚ್ಚಿಸಲಾಗಿದೆ. 2015-16ನೇ ಸಾಲಿನ ಯೋಜನಾ ಗಾತ್ರವನ್ನು ಸರ್ಕಾರ ರೂ 72,597 ಕೋಟಿ ಎಂದು ನಿಗದಿಪಡಿಸಿದೆ. ಈ ಯೋಜನಾ ಗಾತ್ರದಲ್ಲಿ ರಾಜ್ಯ ಸರ್ಕಾರದ ಸಂಪನ್ಮೂಲಗಳು ರೂ 67,882 ಕೋಟಿ ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳ ಸಂಪನ್ಮೂಲ ರೂ 8645 ಕೋಟಿ ಸೇರಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಬಜೆಟ್‍ನ ಯೋಜನಾ ಗಾತ್ರ ಶೇ 10.67 ರಷ್ಟು ಹಿಗ್ಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಗೆ ತರಲು ಅನುಕೂಲವಾಗುವಂತೆ ವಾಣಿಜ್ಯೋದ್ಯಮಗಳನ್ನು ಸಿದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿಗೆ ವಾಣಿಜ್ಯ ತೆರಿಗೆಗಳ ಅಡಿಯಲ್ಲಿ ರೂ 42 ಸಾವಿರ ಕೋಟಿ ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ ಎಂದು ಸಿದ್ದರಾಮ್ಯ ಹೇಳಿದರು. ರೂ 500 ವರೆಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಸೀಮೆ ಎಣ್ಣೆ ಸ್ಟೌವ್ ಮೇಲಿನ ತೆರಿಗೆ ಶೇ 14.5ರಿಂದ ಶೇ 5.5ಕ್ಕೆ ಇಳಿಕೆ.
