ಮೂಡುಬಿದರೆ: ವಲಯ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ ಮೋನಪ್ಪ ಸಾಲ್ಯಾನ್ ಅವರಿಗೆ ಮೂಡುಬಿದರೆ ಸಮಾಜಮಂದಿರದಲ್ಲಿ ಶನಿವಾರ ವಿದಾಯ ಸಮಾರಂಭ ಏರ್ಪಡಿಸಲಾಯಿತು.
ಮೋನಪ್ಪ ಸಾಲ್ಯಾನ್-ಸುಮತಿ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೂಕ್ಷತೆ ಹಾಗೂ ವೃತ್ತಿಪರತೆಯ ಮೋನಪ್ಪ ಸಾಲ್ಯಾನ್ರಿಂದ ಶಿಕ್ಷಾಣಾಧಿಕಾರಿ ಕಚೇರಿಯಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಶಿಕ್ಷಣ ಇಲಾಖೆಗೆ ಎದುರಾಗುವ ಕಾನೂನು ತೊಡಕುಗಳನ್ನು ಪರಿಹರಿಸುವ ನಿಟ್ಟಿನಲ್ಲೂ ಮೋನಪ್ಪ ಸಾಲ್ಯಾನ್ ಶ್ರಮಿಸಿರುವುದು ಶ್ಲಾಘನೀಯ ಎಂದರು.


ಮೂಡುಬಿದರೆ ವಲಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸುರೇಖಾ.ಪಿ, ನಿವೃತ್ತ ಶಿಕ್ಷಕರಾದ ಅಂಡಾರು ಗುಣಪಾಲ್ ಹೆಗ್ಡೆ, ಬಾಬು ಎಂ., ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಆ್ಯಂಡ್ರೋ ಡಿ’ಸೋಜ, ದೈಹಿಕ ಶಿಕ್ಷಣಾಧಿಕಾರಿ ಬಾಬು, ಮೂಡುಬಿದರೆ ವಲಯ ಶಿಕ್ಷಣಾಧಿಕಾರಿಗಳ ಕಚೇರಿಯ ನಿಯೋಜಿತ ಪತ್ರಾಂಕಿತ ವ್ಯವಸ್ಥಾಪಕ ಮನೋಹರ ಕಾಮತ್, ಕಾರ್ಕಳ ದೈಹಿಕ ಶಿಕ್ಷಣಾಧಿಕಾರಿ ಬಾಬು ಪೂಜಾರಿ ಉಪಸ್ಥಿತರಿದ್ದರು.
ಅನುದಾನಿತ ಶಿಕ್ಷಕರ ಸಂಘದ ಉಪಾಧ್ಯಕ್ಷ ಶಶಿಕಾಂತ್, ರೋಟರಿ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತಾ ಅನಿಸಿಕೆ ವ್ಯಕ್ತಪಡಿಸಿದರು.
ಮೂಡುಬಿದರೆ ವಲಯ ಕ.ರಾ. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್ ರಾವ್ ಸ್ವಾಗತಿಸಿದರು. ವಲಯ ಕ.ರಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮತಿ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಪ್ರಸನ್ನ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮೆಲ್ವಿನ್ ಅಲ್ಬುಕರ್ಕ್ ವಂದಿಸಿದರು.
