ಬಂಟ್ವಾಳ:ದಲಿತ ಮಹಿಳೆ ಶಬರಿಯ ಭಕ್ತಿ ಮತ್ತು ತಪಸ್ಸಿಗೆ ಮೆಚ್ಚಿದ ಶ್ರೀರಾಮಚಂದ್ರನು ದುರುದ್ದೇಶವನ್ನಿಟ್ಟು ತಪಸ್ಸು ಮಾಡಿದ್ದ ಶಂಭೂಕ ಎಂಬ ದುಷ್ಟನ ಸಂಹಾರ ಮಾಡಿದ್ದಾನೆ. ಅದೇ ರೀತಿ ಸೇವೆ ಹೆಸರಿನಲ್ಲಿ ಮತಾಂತರ ಮಾಡುವುದು ಕೂಡ ಸರಿಯಲ್ಲ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಸುಮಾರು ರೂ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಶಿಲಾಮಯ ಶ್ರೀರಾಮ ಮಂದಿರ ಗರ್ಭಗುಡಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಅಂದು ಒಬ್ಬ ಮಾತ್ರ ರಾಮನಿದ್ದು, ಇಂದಿನ ಪ್ರಜಾರಾಜ್ಯದಲ್ಲಿ ಎಲ್ಲರ ಅಂತರಂಗದಲ್ಲಿ ದುಷ್ಟ ಆಲೋಚನೆ ದೂರ ಮಾಡಿ ಶ್ರೀರಾಮ ನೆಲೆಸಿದಾಗ ನಿಜವಾದ ರಾಮರಾಜ್ಯ ನಿರ್ಮಾಣವಾಗುವುದು ಎಂದು ಹೇಳಿದ ಅವರು, ಶ್ರೀರಾಮ-ಸೀತೆಯ ಆದರ್ಶವು ಪ್ರತಿಯೊಬ್ಬ ಸ್ತ್ರೀ-ಪುರುಷರಿಗೂ ಮಾದರಿಯಾಗಬೇಕು. ಸಮುದ್ರದಲ್ಲಿ ದಾರಿ ತಪ್ಪಿದ ನಾವೆಗೆ ದಾರಿ ತೋರಿಸುವ ದೀಪಸ್ತಂಭದಂತೆ, ಪ್ರತಿಯೊಬ್ಬರ ಬದುಕಿನಲ್ಲಿಯೂ ಇಂತಹ ಧಾರ್ಮಿಕ ಕೇಂದ್ರಗಳು ದಾರಿದೀಪವಾಗಲಿ ಎಂದರು.

ಶ್ರೀರಾಮನ ಕುರಿತಾಗಿ ಇತ್ತೀಚೆಗೆ ಬುದ್ಧಿಜೀವಿಗಳು ಅಪಪ್ರಚಾರ ಮಾಡುವ ಮೂಲಕ ವಿಕೃತ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜದ ಎಲ್ಲಾ ವರ್ಗವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಮುಕ್ತಿಯ ದಾರಿ ತೋರುವುದಕ್ಕಾಗಿ ಕಾಶಿ ವಿಶ್ವನಾಥ, ಪಂಡರಾಪುರ, ಗೋಕರ್ಣ ಕ್ಷೇತ್ರದಂತೆ ಕಲ್ಲಡ್ಕದಲ್ಲಿಯೂ ಸಮಸ್ತ ಹಿಂದೂಗಳಿಗೆ ಮುಕ್ತ ಪ್ರವೇಶದ ಶ್ರೀರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವುದು ಶ್ಲಾಘನೀಯ. ಇದಕ್ಕೆ ಆಂಜನೇಯನಂತೆ ಸಾರಥ್ಯ ವಹಿಸುತ್ತಿರುವ ಡಾ.ಕೆ.ಪ್ರಭಾಕರ ಭಟ್ಟರ ಶ್ರಮ ಮಾದರಿಯಾಗಿದೆ ಎಂದರು.
ಉದ್ಯಮಿ ಸಮೀರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಚಿಕ್ಕಮಗಳೂರು ವೇದವಿಜ್ಞಾನ ಮಂದಿರ ಪೂರ್ವೋತ್ತರ ಮೀಮಾಂಸಕ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ನ್.ರಾಜೇಂದ್ರ ಕುಮಾರ್, ಉದ್ಯಮಿ ಸುರೇಶ ಶೆಟ್ಟಿ ಗುರ್ಮೆ, ಆರ್‍ಎಸ್‍ಎಸ್ ವಿಭಾಗ ಸಂಘ ಚಾಲಕ ಡಾ.ವಾಮನ ಶೆಣೈ, ವಾಸ್ತುತಜ್ಞ ಪ್ರಸಾದ್ ಮುನಿಯಂಗಳ ಮಾತನಾಡಿದರು.
ಉದ್ಯಮಿಗಳಾದ ಸಂಜಿತ್ ಶೆಟ್ಟಿ ಬೆಂಗಳೂರು, ಅಶೋಕ ರೈ ಪುತ್ತೂರು, ಉಳಿಪಾಡಿಗುತ್ತು ರಾಜೇಶ ನಾಯ್ಕ್, ಬಿ.ಉಮೇಶ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆಪದ್ಮಿನಿಯಮ್ಮ ಅತಿಥಿಯಾಗಿ ಭಾಗವಹಿಸಿದ್ದರು. ಮಂದಿರ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಿತೇಂದ್ರ ಎಸ್.ಕೊಟ್ಟಾರಿ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ ಇದ್ದರು.
ರಾಷ್ಟ್ರೀಯ ಚಿಂತನಾ ಕೇಂದ್ರ:
ಕಲ್ಲಡ್ಕದಲ್ಲಿ ಕಳೆದ 100 ವರ್ಷಗಳ ಹಿನ್ನೆಲೆ ಹೊಂದಿರುವ ಶ್ರೀರಾಮ ಭಜನಾ ಮಂದಿರವು ಧಾರ್ಮಿಕ ಮತ್ತು ಆಧ್ಯಾತ್ಮಿಕತೆ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕೇಂದ್ರವಾಗಿ ರೂಪುಗೊಂಡಿದೆ. ರೂ 10ಕೋಟಿ ವೆಚ್ಚದಲ್ಲಿ 100 ಅಡಿ ಎತ್ತರಕ್ಕೆ ನಿರ್ಮಾಣಗೊಳ್ಳಲಿರುವ ಮಂದಿರದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಪಕ್ಕದಲ್ಲಿ ಹನುಮಂತನ ಏಕಶಿಲಾ ವಿಗ್ರಹ, ಸ್ವಾಗತ ಗೋಪುರ, ರಸ್ತೆಯಿಂದಲೇ ಮಂದಿರಕ್ಕೆ 108 ಮೆಟ್ಟಿಲು ರಚನೆಯಾಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ಇಲ್ಲಿನ ಸುಮಾರು 3,500ಸಾವಿರ ಮನೆಗಳಿಗೆ ಶ್ರೀರಾಮ ಜ್ಯೋತಿ ಮತ್ತು ಶಿಲೆ ಮೆರವಣಿಗೆ ಮೂಲಕ ಹಿಂದೂ ಸಮಾಜ ಮತ್ತು ಕೆಲವು ಕುಟುಂಬಗಳ ಆಂತರಿಕ ಕಲಹ ಶಮನಗೊಂಡು ಪರಸ್ಪರ ವಿಘಟಿತ ‘ಮನಸ್ಸುಗಳು ಜೋಡಣೆ’ಯಾಗಿದೆ. ಸಮಸ್ತ ಹಿಂದೂ ಸಮಾಜವು ಸಾಮರಸ್ಯ, ಏಕತೆ ಮತ್ತು ಶಕ್ತಿಯಾಗಿ ಬೆಳೆಯಬೇಕೆಂಬ ಉದ್ದೇಶದೊಂದಿಗೆ ರಾಷ್ಟ್ರೀಯವಾದ ಚಿಂತನೆ ಈ ಕೇಂದ್ರದಲ್ಲಿ ನಡೆಯಲಿದೆ ಎಂದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಜಿ.ಪಂ.ಸದಸ್ಯ ಆರ್.ಚೆನ್ನಪ್ಪ ಕೋಟ್ಯಾನ್ ವಂದಿಸಿದರು. ವಿದ್ಯಾಶ್ರೀ ಪ್ರಾರ್ಥಿಸಿದರು. ರಾಜೇಶ ಕೊಳಕ್ಕೀರು ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ತೊನ್ಸೆ ಪುಷ್ಕಳ ಕುಮಾರ್ ತಂಡದಿಮದ ‘ಭಕ್ತಿಗಾನ ವೈಭವ’ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶೋಭಾಯಾತ್ರೆ:
ಆರಂಭದಲ್ಲಿ ಕಲ್ಲಡ್ಕ ಸಮೀಪದ ಐದು ಮಂದಿರಗಳಿಂದ ಆಗಮಿಸಿದ್ದ ‘ಶ್ರೀರಾಮ ಜ್ಯೋತಿ’ ಮತ್ತು ಶಿಲೆಯ ಮೆರವಣಿಗೆಯನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸ್ವಾಗತಿಸಲಾಯಿತು. ಆ ಬಳಿಕ ಇಲ್ಲಿಂದ ಶ್ರೀರಾಮ ಜ್ಯೋತಿ ಮತ್ತು ಶಿಲೆಯನ್ನು ಅದ್ದೂರಿ ಮೆರವಣಿಗೆ ಮೂಲಕ ಶ್ರೀರಾಮ ಮಂದಿರಕ್ಕೆ ತರಲಾಯಿತು. ಶಿಲಾನ್ಯಾಸದಲ್ಲಿ ಭಕ್ತರಿಗೆ ಸ್ವತಃ ಹಾಲಿನ ಅಭಿಷೇಕ ಮಾಡಲು ಅವಕಾಶ ನೀಡಲಾಗಿತ್ತು. ಮಧ್ಯಾಹ್ನತನಕವೂ ಅಪಾರ ಮಂದಿ ಭಕ್ತರು, ವಿದ್ಯಾರ್ಥಿಗಳು ಹಾಲೆರೆದು ಪ್ರಾರ್ಥನೆ ಸಲ್ಲಿಸಿದರು.



