ಪಡಿತರ ಸಮಸ್ಯೆಗಳಿಗೆ ಸಿಗದ ಪರಿಹಾರ: ಹೊಸಬೆಟ್ಟು ಗ್ರಾಮಸ್ಥರ ಅಳಲು
ಮೂಡುಬಿದರೆ: ಹೊಸಬೆಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವಾರು ಮಂದಿಗೆ ಇನ್ನೂ ಪಡಿತರ ಚೀಟಿ ಸಿಕ್ಕಿಲ್ಲ. ಜ.13ಕ್ಕೆ ಮಂಗಳೂರಿನಲ್ಲಿ ಪಡಿತರ ಚೀಟಿ ನೀಡುವುದಾಗಿ ಲಿಖಿತ ಪತ್ರ ನೀಡಿದ್ದು ಫಲಾನುಭವಿಗಳು ಅಲ್ಲಿಗೆ ಹೋದಾಗ ಪಂಚಾಯಿತಿನಲ್ಲಿ ನೀಡುವುದಾಗಿ ಹೇಳಿ ವಾಪಾಸ್ಸು ಕಳುಹಿಸಿದ್ದಾರೆ ಸದಸ್ಯ ವಲೇರಿಯನ್ ಕುಟಿನ್ಹಾ ಆರೋಪಿಸಿದರು.
ಹೊಸಬೆಟ್ಟು ಗ್ರಾ.ಪಂನಲ್ಲಿ ಅಧ್ಯಕ್ಷೆ ರೀಟಾ ಕುಟಿನ್ಹಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಎರಡನೇ ಸುತ್ತಿನ ಕಂದಾಯ ಮತ್ತು ಪಿಂಚಣಿ ಅದಾಲತ್ನಲ್ಲಿ ಈ ಬಗ್ಗೆ ತಹಸೀಲ್ದಾರರ ಗಮನಕ್ಕೆ ತಂದರು. ಪಡಿತರ ಚೀಟಿ ಸಮಸ್ಯೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪ್ರತಿ ಶುಕ್ರವಾರದಂದು ಆಹಾರ ನಿರೀಕ್ಷಕರು ಆಹಾರ ನಿರೀಕ್ಷಕರು ತಹಸೀಲ್ದಾರ್ ಕಚೇರಿಗೆ ಬರುತ್ತಿದ್ದು ಅವರಲ್ಲಿ ಚರ್ಚಿಸಿ ಬಗೆ ಹರಿಸುವುದಾಗಿ ಹೇಳಿದರು.

ತೋಡಾರಿನ ಅಂಗವಿಕಲ ಶೇಖರ ಶೆಟ್ಟಿ ಅವರು ತನಗೆ ಬೇರೆ ಬೇರೆ ಸರ್ವೇ ನಂಬರಿನಲ್ಲಿ ಜಾಗವಿದೆ ಆದರೆ ಇದು ಆರ್ಟಿಸಿಗೆ ಸರಿಹೊಂದುತ್ತಿಲ್ಲ ಆದ್ದರಿಂದ ದಾಖಲೆಪತ್ರಗಳನ್ನು ಸರಿಪಡಿಸಿ ನೀಡುವಂತೆ ತಹಸೀಲ್ದಾರರ ಗಮನಕ್ಕೆ ತಂದರು. ಈ ಸಮಸ್ಯೆಗೆ ಮಂಗಳೂರು ಭೂಮಂಡಳಿಯನ್ನು ಸಂಪರ್ಕಿಸುವಂತೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಸಲಹೆ ನೀಡಿದರು.
ಬಸವ ವಸತಿ ಯೋಜನೆಯಲ್ಲಿ 50,000 ಸಹಾಯಧನ ತನಗೆ ಬಂದಿದ್ದು ಇದು ತನ್ನ ಆರ್ಟಿಸಿಯಲ್ಲಿ ಸೇರ್ಪಡೆಗೊಂಡಿರುವುದರಿಂದ ತನಗೆ ತೊಂದರೆಯಾಗುತ್ತಿದೆ ಇದನ್ನು ರದ್ದು ಪಡಿಸುವಂತೆ ತೋಡಾರಿನ ಅಬ್ದುಲ್ಲಾ ಅವರು ಹೇಳಿದರು. ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ ಸರಿಪಡಸಲು ಅವಕಾಶವಿದೆ ಎಂದು ತಹಶೀಲ್ದಾರ್ ತಿಳಿಸಿದರು.
ನಾಡಕಚೇರಿಯ ಅಟಲ್ ಜನಸ್ನೇಹಿ ಕೇಂದ್ರದ ಸಿಬಂದಿ ಕರ್ತವ್ಯ ವೇಳೆ ಮೊಬೈಲ್ನಲ್ಲಿ ಹರಟೆ ಹೊಡೆಯುತ್ತಿದ್ದು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಗ್ರಾಮಸ್ಥ ಲಿಯೋ ಅವರು ದೂರು ನೀಡಿದರು. ಅಲ್ಲದೆ ವಿಕಲಚೇತನರ ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿದರೂ ಇನ್ನು ಯಾವುದೇ ಸ್ಪಂದನೆ ಎಂದು ಕೆಲವರು ಅಸಹಾಯಕತೆ ತೋಡಿಕೊಂಡರು.
ಪ್ರಸ್ತುತ ತಮ್ಮ ಇಲಾಖೆಯಲ್ಲಿ ಯಾವುದೇ ಅರ್ಜಿಗಳು ಬಾಕಿಯಿರುವುದಿಲ್ಲ. ಸಕಾಲದಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ 70 ದಿನಗಳೊಳಗೆ ಮಂಜೂರಾತಿ ಪತ್ರ ನೀಡಲಾಗುವುದು ಈ ಕುರಿತು ಪರಿಶೀಲನೆ ನಡೆಸುವುದಾಗಿ ತಹಶೀಲ್ದಾರ್ ಉತ್ತರಿಸಿದರು. ಇದಲ್ಲದೆ ಆರ್ಟಿಸಿ ಮತ್ತು ಜಾಗಕ್ಕೆ ಸಂಬಂಧಪಟ್ಟಂತೆ ದೂರುದಾರರು ನೀಡಿರುವ ಹಲವು ಅರ್ಜಿಗಳನ್ನು ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರು ಪರಿಶೀಲನೆ ನಡೆಸಿ ಮಾಹಿತಿಯನ್ನು ನೀಡಿದರು.
ಇದಲ್ಲದೆ ವಿಕಲಚೇತನ ಮಾಸಾಶನ, ವೃದ್ಧಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ಮಂಜುರಾತಿ ಪತ್ರಗಳನ್ನು ವಿತರಿಸಿದರು.
ಪಂಚಾಯಿತಿ ಉಪಾಧ್ಯಕ್ಷ ಜಯರಾಮ ಬಂಗೇರಾ, ಸದಸ್ಯರಾದ ಎಂ.ಎ ರಝಾಕ್, ದಿವಾಕರ ಶೆಟ್ಟಿ ತೋಡಾರು, ವಿಲ್ಫ್ರೆಡ್ ಮೆಂಡೋನ್ಸಾ, ಚಂದ್ರಹಾಸ, ರೊನಾಲ್ಡ್ ಸೇರಾ, ಪಿಡಿಓ ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.
