ಮೂಡುಬಿದಿರೆ:ಇಲ್ಲಿನ ಪುರಸಭೆಯಲ್ಲಿ ಗ್ರಾಸ್ ಕಟ್ಟಿಂಗ್ನಂತಹ ಕೆಲಸಗಳಲ್ಲಿ ನಿರಂತರ ಅವ್ಯವಹಾರ ಬೇಕಾಬಿಟ್ಟಿ ನಡೆಯುತ್ತಿದೆ ಎಂದು ಮಾಹಿತಿ ಪತ್ರಕರ್ತ ಜೈಸನ್ ತಾಕೋಡೆ ಆರೋಪಿಸಿದ್ದಾರೆ. ಮಾಹಿತಿಯ ಪ್ರಕಾರ ಪುರಸಭೆಯಲ್ಲಿ ಇದುವರೆಗೆ ಸುಮಾರು 1950 ಗಂಟೆಗಳಿಗೂ ಮೇಲ್ಪಟ್ಟ ಕೆಲಸ ಆದ ಬಿಲ್ಗಳು ಬಂದಿವೆ. ಇನ್ನೂ ಹೆಚ್ಚಿನ ಕೆಲಸ ಆಗಿದ್ದು ಕೆಲವು ವಾರ್ಡ್ಗಳ ಬಿಲ್ಲುಗಳು ಬರುವುದು ಬಾಕಿ ಇವೆ. ಸಾವಿರಗಟ್ಟಲೆ ಗಂಟೆಗಳ ಕೆಲಸ ಆಗುವಾಗ ಪುರಸಭೆ ಕಡಿಮೆ ದರದಲ್ಲಿ ಕೆಲಸ ಮಾಡಿಸುವುದು ಸಾಧ್ಯವಿತ್ತು. ಆದರೆ ಪುರಸಭೆಯಲ್ಲಿ ಗಂಟೆಗೆ 300 ರೂಪಾಯಿಗಳಂತೆ ಗಂಟೆಗೆ ಸುಮಾರು 75 ರೂಪಾಯಿ ಹೆಚ್ಚುವರಿ ನೀಡಿ ಕೆಲಸ ಮಾಡಿದ ಬಗ್ಗೆ ಅಂದರೆ ಸುಮಾರು 25% ಹೆಚ್ಚುವರಿ ಮೊತ್ತಕ್ಕೆ ಕೆಲಸ ಮಾಡಿಸಲಾಗಿದೆ ಎಂದು ಜೈಸನ್ ಸೋಮವಾರ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆಯಲ್ಲಿ ಸಾಮಾನ್ಯವಾಗಿ ಗ್ರಾಸ್ಕಟ್ಟಿಂಗ್ಗೆ ಗಂಟೆಗೆ 250 ರೂಪಾಯಿ ದರ ಇದೆ. ಹೆಚ್ಚು ಗಂಟೆಗಳ ಕಾಲ ಕೆಲಸ ಇದ್ದರೆ ಗಂಟೆಗೆ 225 ರೂಪಾಯಿ ದರದಲ್ಲೂ, ಇನ್ನೂ ಹೆಚ್ಚು ಕೆಲಸವಿದ್ದರೆ ಗಂಟೆಗೆ 210 ರೂಪಾಯಿ ದರದಲ್ಲೂ ಕೆಲಸ ಮಾಡಿಸುವುದು ಸಾಧ್ಯವಿದೆ. ಆದರೆ ಹೆಚ್ಚುವರಿ ದರದಲ್ಲಿ ಕೆಲಸ ಮಾಡಿಸಿರುವುದರಿಂದ ಪುರಸಭೆಗೆ ಸುಮಾರು ಒಂದುವರೆ ಲಕ್ಷ ರೂಪಾಯಿಗಳಷ್ಟು ನಷ್ಟ ಮಾಡಲಾಗಿದೆ. ದರದ ವಿಚಾರದಲ್ಲಿ ಹೀಗೆ ಅಪ್ರಾಮಾಣಿಕರಾದವರು, ಇನ್ನು ಗಂಟೆಗಳ ಲೆಕ್ಕದಲ್ಲಿ ಯಾಕೆ ಗೋಲ್ಮಾಲ್ ಮಾಡಿರಬಾರದು? ಎಂಬ ಸಂಶಯವೂ ಇದೆ. ಪುರಸಭೆಯ ಹಣ ಅಂದರೆ ಅದು ಸಾರ್ವಜನಿಕರ ಹಣ. ಅದನ್ನು ಹೀಗೆ ಬೇಕಾಬಿಟ್ಟಿ ಪೋಲು ಮಾಡುವುದು ಸರಿಯಲ್ಲ. ಹೆಚ್ಚುವರಿ ಬಿಲ್ ಆಗಿರುವುದರಿಂದ ಹೆಚ್ಚುವರಿಯಾಗಿ ಹೋದ ದುಡ್ಡು ಕಮಿಷನ್ ರೂಪದಲ್ಲಿ ಹಲವರಿಗೆ ಸಂದಾಯವಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸಾಮಾನ್ಯವಾಗಿ ಕೆಲಸ ಮಾಡುವವರು 7 ರಿಂದ 8 ಗಂಟೆ ಕೆಲಸ ಮಾಡುತ್ತಾರೆ. ಆದರೆ ಕೆಲವು ಕಡೆ ದಿನಕ್ಕೆ 10 ಗಂಟೆ ಕೆಲಸ ಮಾಡಿದ ಬಗ್ಗೆಯೂ ಬಿಲ್ಗಳಿವೆ. ಇದು ಹೇಗೆ ಸಾಧ್ಯ ಎಂದವರು ಸಂಶಯ ವ್ಯಕ್ತಪಡಿಸಿದರು.
ಈ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರು ನಿರ್ವಹಿಸಿರುವ ಇತರ ಕಾಮಗಾರಿಗಳ ಬಗ್ಗೆಯೂ ತನಿಖೆ ಮಾಡುವ ಅಗತ್ಯವಿದೆ. ಜಿಲ್ಲಾಧಿಕಾರಿಯವರು ಮತ್ತು ಯೋಜನಾ ನಿರ್ದೇಶಕರು ಈ ಬಗ್ಗೆ ಕೂಲಂಕೂಷ ತನಿಖೆ ನಡೆಸಿ, ಪುರಸಭೆಯಲ್ಲಿ ಇಂತಹ ಅಕ್ರಮಗಳು ಮುಂದೆ ನಡೆಯದಂತೆ ತಡೆಯಬೇಕಾಗಿದೆ ಎಂದ ಜೈಸನ್ ಸಾಮಾಜಿಕ ಕಾರ್ಯಕರ್ತನಾಗಿ ಸಮಾಜಕ್ಕೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿರುವ ತಮಗೆ ಎಲ್ಲಿ ತಮ್ಮ ಬಣ್ಣ ಕಳಚಿ ಹೋಗುತ್ತದೆಯೋ ಎಂದು ಕೆಲವರು ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇದಕ್ಕೆ ಮಣಿಯದೇ ಮುಂದಿನ ದಿನಗಳಲ್ಲಿ ಪುರಸಭೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿನ ಅವ್ಯವಹಾರಗಳ ದಾಖಲೆಗಳನ್ನು ಬಹಿರಂಗಪಡಿಸಿಯೇ ಸಿದ್ಧ ಎಂದವರು ಪ್ರಕಟಿಸಿದರು.
