ಮೂಡುಬಿದರೆ: ನೈತಿಕ, ಆಧ್ಯಾತ್ಮಿಕ ವಿಚಾರಗಳನ್ನು ಪಸರಿಸುವ ಕೇಂದ್ರ ದೇವಾಲಯ. ಶುಭ ಸಂಕಲ್ಪದ ಸಿದ್ಧಿ ನೀಡುವ ದೇವಾಲಯಗಳಲ್ಲಿ ನಿರಂತರ ಸಾಮರಸ್ಯ ಜಾಗೃತಗೊಳಿಸುವ ಕೆಲಸವಾಗಬೇಕೆಂದು ಮುಡುಬಿದರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಅಲಂಗಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀವರ್ಚನ ನೀಡಿದರು. ಶಿವ ದೇವರು ಪ್ರಕೃತಿಯ ಬಹುತೇಕ ಎಲ್ಲ ಅಂಶಗಳನ್ನು ಹೊಂದಿರುವ ದೇವ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಆತನಲ್ಲಿದೆ. ಉತ್ತರ ದಿಕ್ಕಿನಲ್ಲಿ ಜೈನಕಾಶಿ ಮೂಡುಬಿದರೆಗೆ ಸ್ವಾಗತಗೋಪುರದಂತಿರುವ ದೇವಸ್ಥಾನ ಭಕ್ತರಿಗೆ ಪವಿತ್ರ ಕ್ಷೇತ್ರವಾಗಿದೆ ಎಂದರು.
ಶ್ರೀ ಕ್ಷೇತ್ರ ಅಲಂಗಾರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಲಿ ಸಮಾರಂಭದ ಅಧ್ಯಕ್ಷತೆ ವಹಿಸಿ, ದೇವಸ್ಥಾನವು ಏಕತೆಯನ್ನು ಪ್ರತಿಪಾಧಿಸುವ ಕೇಂದ್ರವಾದರೆ ರಾಷ್ಟ್ರೀಯ ಭಾವೈಕ್ಯತೆ ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ಬರುತ್ತದೆ. ನನಗೆ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಶ್ರೀಕ್ಷೇತ್ರ ಅಲಂಗಾರು ಪ್ರೇರಣೆಯಾಗಿದೆ ಎಂದರು.
ಅಲಂಗಾರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ.ಈಶ್ವರ ಭಟ್ ಹಾಗೂ ಅವರ ಪುತ್ರರಾದ ಸುಬ್ರಹ್ಮಣ್ಯ ಭಟ್, ಪ್ರಸಾದ್ ಭಟ್ ಅವರನ್ನು ಸನ್ಮಾನಿಸಲಾಯಿತು. ಮೂಡುಬಿದರೆ ವೆಂಕಟರಮಣ ಭಜನಾ ಮಂಡಳಿಯ ವತಿಯಿಂದ ಈಶ್ವರ ಭಟ್ ಅವರನ್ನು ಗೌರವಿಸಲಾಯಿತು.
ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಸುಬ್ರಹ್ಮಣ್ಯ ಅವಧಾನಿ, ಕ್ಷೇತ್ರದ ಸಲಹೆಗಾರ ಶ್ರೀಪತಿ ಭಟ್, ಉಗ್ಗುಗುತ್ತು ಸದಾನಂದ ಶೆಟ್ಟಿ, ವಾದಿರಾಜ ಮಡ್ಮಣ್ಣಾಯ, ಮೂಡುವೇಣುಪುರ ಶ್ರೀವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಕೊರಗ ಶೆಟ್ಟಿ, ಉದ್ಯಮಿ ಎಂ.ಶೀನಪ್ಪ ಉಪಸ್ಥಿತರಿದ್ದರು.
ರಾಜಾರಾಂ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ, ಧನಂಜಯ ಮೂಡುಬಿದರೆ, ಗುರುಪ್ರಸಾದ್ ಸನ್ಮಾನಿತರನ್ನು ಪರಿಚಯಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹೊಸನಗರ ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಕುಮಾರ ವಿಜಯ’ ಯಕ್ಷಗಾನ ಬಯಲಾಟ ನಡೆಯಿತು.
ಶನಿವಾರ ಕವಾಟೋದ್ಘಾಟನೆ,ದುರ್ಗಾಹೋಮ, ಚೂರ್ಣೊತ್ಸವ, ಯಾತ್ರಹೋಮ, ಓಕುಳಿ, ಅವಭೃತ ಸ್ನಾನ, ಮೈಸಂದಾಯ, ರಕ್ತೇಶ್ವರಿ ದೈವಗಳ ನೇಮ ಹಾಗೂ ಧ್ವಜಾಬರೋಹಣ ನಡೆಯಿತು.
