ಬಂಟ್ವಾಳ : : ಹಾವೊಂದನ್ನು ಹಿಡಿಯಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಮೃತಪಟ್ಟ ಘಟನೆ ಪುಂಜಾಲಕಟ್ಟೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕೆತ್ತಿಗುಡ್ಡೆ ನಿವಾಸಿ ಜೆರಾಲ್ಡ್ ರೋಡ್ರಿಗಸ್(55)ಮೃತಪಟ್ಟವರು.
ಪುಂಜಾಲಕಟ್ಟೆ ಪೇಟೆಯ ಉದ್ಯಮಿಯೋರ್ವರ ಮನೆಗೆ ರಾತ್ರಿಹೊತ್ತು ಹಾವೊಂದು ಬಂದಿತ್ತು . ಇಲ್ಲಿನ ಪೇಟೆಯಲ್ಲಿ ತಲೆಹೊರೆ ಕೂಲಿಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜೆರಾಲ್ಡ್ ಅವರು ಹಾವನ್ನು ಹಿಡಿಯಲು ಬಂದ್ದಿದ್ದರು. ಆಗ ಮನೆಯವರು ಹಾವನ್ನು ಹಿಡಿಯುವುದು ಬೇಡವೆಂದು ಎಷ್ಟು ಹೇಳಿದರೂ ಕೇಳದೆ ಹಾವನ್ನು ಹಿಡಿಯುವ ಪ್ರಯತ್ನ ನಡೆಸಿದ್ದರು. ಅಲ್ಲಿದ್ದ ಕನ್ನಡಿ ಹಾವನ್ನು ಹೆಬ್ಬಾವೆಂದು ತಪ್ಪಾಗಿ ಅರ್ಥೈಸಿ ಹಿಡಿದಿದ್ದರು. ಅಷ್ಟರಲ್ಲಿ ಹಾವು ಅವರ ಕೈಗೆ ಕಚ್ಚಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಸ್ಥಳೀಯರು ಅದನ್ನು ಕನ್ನಡಿ ಹಾವೆಂದು ಗುರುತಿಸಿ ಅದನ್ನು ಕೊಂದು ಹಾಕಿದ್ದರು. ಕೈಗೆ ಹಾವು ಕಚ್ಚಿಸಿಕೊಂಡ ಜೆರಾಲ್ಡ್ ಹಳ್ಳಿ ಮದ್ದು ಪಡೆದು ಮನೆಗೆ ತೆರಳಿದ್ದರು. ಬುಧವಾರ ಬೆಳಗ್ಗೆ ಅವರ ಆರೋಗ್ಯ ವಿಷಮಿಸಿ ಅವರನ್ನು ಬದ್ಯಾರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹಾವಿನ ವಿಷದ ಪ್ರಭಾವದಿಂದ ಆದಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ , ಮೂವರು ಪುತ್ರರನ್ನು ಅಗಲಿದ್ದಾರೆ.

