ಬಜ್ಪೆ: ಹಿಟಾಚಿ ಯಂತ್ರದಲ್ಲಿ ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಅಳವಡಿಸುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಫೆ.2ರಂದು ಬಡಗುಳಿಪಾಡಿ ಗ್ರಾಮದ ಮಳಲಿಯ ಮಟ್ಟಿ ಎಂಬಲ್ಲಿ ಮಲ್ಲಯ್ಯ ಎಂಬವರು ತನ್ನ ಹಿಟಾಚಿ ಯಂತ್ರದಲ್ಲಿ ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ಗೆ ಹಾದಿ ಮಾಡಿಕೊಡಲು ಸ್ಥಳೀಯರ ಜಮೀನಿನಲ್ಲಿ ಅಗೆಯುತ್ತಿದ್ದರು. ಈ ವೇಳೆ ಮಟ್ಟಿಯ ದೋಗ್ರ ಪೂಜಾರಿ ಎಂಬವರು ಸುಮಾರು 25ರಿಂದ 30 ಜನರ ತಂಡದೊಂದಿಗೆ ಆಗಮಿಸಿ ಇಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸಲು ಸ್ಥಳೀಯರ ವಿರೋಧ ಇದೆ ತಕ್ಷಣ ಹಿಟಾಚಿ ಯಂತ್ರದಿಂದ ಇಳಿಯುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಅದಕ್ಕೆ ಹಿಟಾಚಿ ಚಾಲಕ ಮಲ್ಲಯ್ಯ ಕಂಪೆನಿ ನನ್ನನ್ನು ಅಗೆಯುವಂತೆ ಹೇಳಿದೆ ಎಂದಾಗ ಇದರಿಂದ ಕುಪಿತರಾದ ಇಬ್ಬರು ಸ್ಥಳೀಯರು ಮಲ್ಲಯ್ಯನನ್ನು ತಡೆದು ನಿಲ್ಲಿಸಿ, ಕೈಗಳಿಂದ ಹೊಡೆದು ನೆಲಕ್ಕೆ ದೂಡಿ ಹಾಕಿ ಕೈಗಳಿಂದ ತುಳಿದು ಹಲ್ಲೆ ನಡೆಸಿದ್ದೇ ಅಲ್ಲದೆ. `ನಿನ್ ಕಂಪೆನಿಯವರಿಗೆ ಭಾಷೆ ಇಲ್ಲವಾ?, ನಾವು ಮೊನ್ನೆ ಎಚ್ಚರಿಕೆ ಕೊಟ್ಟರೂ ಕೆಲಸ ಆರಂಭ ಮಾಡಿದ್ದೀಯಾ, ನಿನಗೆ ಜೀವದಲ್ಲಿ ಆಸೆ ಇಲ್ಲವಾ?’ ಎಂದು ಪ್ರಶ್ನಿಸಿ, `ಇನ್ನು ಮುಂದೆ ಇಲ್ಲಿ ಕೆಲಸ ಮಾಡಿದರೆ ಜಾಗೃತೆ’ ಎಂದು ಜೀವಬೆದರಿಕೆ ಒಡ್ಡಿದ್ದಾರೆ ಎಂದು ಎಂದು ಮಲ್ಲಯ್ಯ ಅವರು ಬಜ್ಪೆ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಹಲ್ಲೆ ಯಾಕೆ?
ಕಳೆದ ತಿಂಗಳ ಜ.31ರಿಂದ ಮಳಲಿಯ ಮಟ್ಟಿ ಎಂಬಲ್ಲಿ ಎಚ್ಪಿಸಿಎಲ್ ಕಂಪೆನಿಯ ಗ್ಯಾಸ್ ಪೈಪ್ಲೈನ್ಗಾಗಿ ಮಣ್ಣು ಅಗೆಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಇಲ್ಲಿ ಕೆಲಸ ನಿರ್ವಹಿಸುವುದಕ್ಕೆ ಗ್ರಾಮಸ್ಥರ ವಿರೋಧ ಇದೆ, ಇನ್ನು ಮುಂದೆ ಕೆಲಸ ಮಾಡಬಾರದು ಎಂದು ಹೇಳಿದ್ದರು.
ಆದರೆ ಊರವರ ಮಾತನ್ನು ಕೇಳದ ಮಲ್ಲಯ್ಯ ಕಂಪೆನಿಯ ಸಲಹೆಯಂತೆ ಗ್ರಾಮಸ್ಥರ ವಿರೋಧವನ್ನೂ ಲೆಕ್ಕಿಸದೆ ಮಣ್ಣು ಅಗೆಯುತ್ತಿದ್ದರು ಎನ್ನಲಾಗಿದೆ. ಇದರಿಂದ ಕುಪಿತರಾದ ಸ್ಥಳಿಯರು ಮಲ್ಲಯ್ಯನನ್ನು ಕೆಲಸ ನಿರ್ವಹಿಸದಂತೆ ತಡೆದಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷದಿಂದಲೇ ಎಚ್ಪಿಸಿಎಲ್ ಕಂಪೆನಿಯ ಗ್ಯಾಸ್ಪೈಪ್ಲೈನ್ ಅಳವಡಿಕೆಗೆ ಸ್ಥಳೀಯರು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಕೈಗೊಂಡಿದ್ದರು. ಅಲ್ಲದೆ ಜಿಲ್ಲಾಧಿಕಾರಿ ಸಹಿತ ಹಲವಾರಿ ಮಂದಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೂ ಕಂಪೆನಿ ಇಲ್ಲಿ ಪೈಪ್ಲೈನ್ ಅಳವಡಿಸುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ. ಕಂಪೆನಿ ಬೇಕೆಂದೇ ಸ್ಥಳೀಯರ ವಿರುದ್ಧ ಕೇಸ್ ಜಡಿದಿದೆ, ನಾವ್ಯಾರೂ ಮಲ್ಲಯ್ಯನಿಗೆ ಹಲ್ಲೆ ಅಥವಾ ನಿಂದನೆ ಮಾಡಿಲ್ಲ ವಿರೋಧ ವ್ಯಕ್ತಪಡಿಸಿದ್ದೆವಷ್ಟೆ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *