‘ಶಿಲಾಮಯ ದೇಗುಲದಿಂದ ಸಾನಿಧ್ಯ ವೃದ್ಧಿ’
ಸುದ್ದಿ9 ಬಂಟ್ವಾಳ: ಬಂಟ್ವಾಳ ನೇತ್ರಾವತಿ ನದಿ ತೀರದಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಕಾರಣಿಕ ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಇದೀಗ ರೂ 2.5ಕೋಟಿ ವೆಚ್ಚದಲ್ಲಿ ಶಿಲಾಮಯ ಸುತ್ತುಪೌಳಿ ಮತ್ತು ತಾಮ್ರಕವಚ ಸಹಿತ ಧ್ವಜಸ್ಥಂಭ ಪ್ರತಿಷ್ಠೆಗೊಂಡು ಬ್ರಹ್ಮಕಲಶೋತ್ಸವ ನಡೆಸುತ್ತಿರುವುದು ಔಚಿತ್ಯಪೂರ್ಣ ಮತ್ತು ಸಾನಿಧ್ಯ ವೃದ್ಧಿಗೂ ಪೂರಕವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಬಂಟ್ವಾಳದಲ್ಲಿ ರೂ 2.5ಕೋಟಿ ವೆಚ್ಚದಲ್ಲಿ ಶಿಲಾಮಯ ಸುತ್ತುಪೌಳಿ ಮತ್ತು ತಾಮ್ರಕವಚ ಸಹಿತ ಧ್ವಜಸ್ಥಂಭ ಪ್ರತಿಷ್ಠೆಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬುಧವಾರ ಅವರು ಭೇಟಿ ನೀಡಿ ಮಾತನಾಡಿದರು.
ಬಂಟ್ವಾಳ ಪೇಟೆಯಲ್ಲಿ ಬಹುತೇಕ ಎಲ್ಲಾ ಧಾರ್ಮಿಕ ಕೇಂದ್ರಗಳು ಕೂಡಾ ಪುನರ್ನವೀಕರಣಗೊಂಡಿದ್ದು, ಇಲ್ಲಿನ ದೇವಳದ ಗರ್ಭಗುಡಿಯಲ್ಲಿ ಸೂಕ್ತ ಗಾತ್ರದಲ್ಲಿರುವ ಶಿವಲಿಂಗ ದರ್ಶನ ವೇಳೆ ಭಕ್ತರಿಗೆ ಅಪೂರ್ವ ಸೆಳೆತದೊಂದಿಗೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಕರುಣಿಸುತ್ತದೆ ಎಂದರು.
ಬಾಲ್ಯದಲ್ಲಿ ನಾನು ಕೂಡಾ ಇಲ್ಲೇ ಪ್ರಾಥಮಿಕ ಶಿಕ್ಷಣ ಮಾಡುತ್ತಿದ್ದು, ಮಧ್ಯಾಹ್ನ ಊಟಕ್ಕೆ ಇದೇ ದೇವಳದ ಎದುರು ನನ್ನ ಪೂಜ್ಯರು ವ್ಯವಸ್ಥೆ ಮಾಡಿರುವುದು ನೆನಪಿಗೆ ಬರುತ್ತಿದೆ ಎಂದರು. ಬಂಟ್ವಾಳ ಪರಿಸರದಲ್ಲಿ ಬಹುತೇಕ ವಿಷ್ಣು ದೇವಾಲಯ ಹೊಂದಿದ್ದು, ಇಲ್ಲಿನ ಶಿವಾಲಯ ಆಕರ್ಷಕ ಕೆತ್ತನೆಗಳಿಂದ ಶಿಲಾಮಯ ‘ಹರಿಹರ’ ಕ್ಷೇತ್ರವಾಗಿ ರೂಪುಗೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಬಿ. ರಮೇಶಾನಂದ ಸೋಮಯಾಜಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ರಘುನಾಥ ಸೋಮಯಾಜಿ, ಸದಸ್ಯ ಪ್ರಕಾಶ ಕಾರಂತ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಉಮಾ ಸೋಮಯಾಜಿ, ಪ್ರಮುಖರಾದ ರಘುನಾಥ ಪಯ್ಯಡೆ ಕುರಿಯಾಳ, ಪರಮೇಶ್ವರ ಐತಾಳ ಕಂದೂರು, ಭುವನೇಶ ಶೆಟ್ಟಿ ಬಂಟ್ವಾಳ, ಪಿ.ವೆಂಕಪ್ಪಯ್ಯ ಭಟ್, ಪಿ. ಕೃಷ್ಣರಾಜ ಭಟ್, ಗಣೇಶಾನಂದ ಸೋಮಯಾಜಿ, ಲಕ್ಷ್ಮೀನಾರಾಯಣ ಭಟ್, ಬಿ. ಸುರೇಶ್ ರಾವ್, ಜಗದೀಶ ಹೊಳ್ಳ, ಅಶೋಕ ಕುಮಾರ್ ಬರಿಮಾರು, ಅಭರ್ಿ ನಾರಾಯಣ ಸೋಮಯಾಜಿ, ವಕೀಲ ನಾರಾಯಣ ಸೋಮಯಾಜಿ, ಡಾ. ಶಶಿಕಲಾ ಸೋಮಯಾಜಿ, ಮೀನಾಕ್ಷಿ ಟೀಚರ್, ಲೋಕನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

