ಸುದ್ದಿ9 ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿಯ ದಡದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಶಿಲಾಮಯ ಪ್ರಕಾರ ಪೌಳಿ ಸಮರ್ಪಣೆ, ನೂತನ ದ್ವಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಫೆ.4ರಿಂದ ಫೆ12ರವರೆಗೆ ನಡೆಯಲಿದೆ.
ಈ ಕುರಿತು ಶನಿವಾರ ಸಂಜೆ ದೇವಳದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಬಿ ರಮೇಶಾನಂದ ಸೋಮಯಾಜಿ ಅವರು ಮಾತನಾಡಿ ಬ್ರಹ್ಮಶ್ರೀ ಪೊಳಲಿ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಲಿದ್ದು ಫೆ.8ರಂದು ದ್ವಜ ಪ್ರತಿಷ್ಠಾಪನೆ,ಧಾರ್ಮಿಕ ಸಭೆ ನಡೆಯಲಿದ್ದರೆ ಫೆ 11ರಂದು ಬ್ರಹ್ಮ ಕಲಶಾಭಿಷೇಕ ಜರಗಲಿದೆ. ಪ್ರತಿ ದಿನವೂ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಕ್ಷೇತ್ರದ ಐತಿಹ್ಯ
800ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಖರಾಸುನ ಪ್ರತಿಷ್ಠಾಪಿಸಿದ ಪ್ರತೀತಿಯೂ ಇದೆ. ಬಂಟ್ವಾಳ ಮತ್ತು ಆಸುಪಾಸಿನ ಪ್ರದೇಶಗಳ ಏಕ ಮಾತ್ರ ಶಿವಮಂದಿರ ಎನ್ನುವ ಕೀರ್ತಿ ಈ ಪುರಾಣ ದೇಗುಲಕ್ಕೆ ಸಲುತ್ತದೆ. 1923ರಲ್ಲಿ ನೇತ್ರಾವತಿ ನದಿಯಲ್ಲಿ ಭಾರೀ ಪ್ರವಾಹ ಬಂದು, ಬಂಟ್ವಾಳವೇ ಒಂದು ದ್ವೀಪವಾಗಿ ಪರಿವರ್ತನೆಗೊಂಡಾಗ, ಕಂಗಾಲಾದ ಊರಿನ ಜನರಿಗೆ ಆಶ್ರಯ ನೀಡಿದ್ದು ಕ್ಷೇತ್ರದ ಹಿರಿಮೆ.
1967ರ ವರೆಗೆ ನಿತ್ಯಪೂಜೆ ನಡೆಯುತ್ತಿದ್ದ ಈ ದೇವಸ್ಥಾನದಲ್ಲಿ ಎರಕಳ ಶ್ರೀಕೃಷ್ಣ ಸೋಮಯಾಜಿ, ಅರ್ಬಿ ಶ್ರೀಅನಂತ ಸೋಮಯಾಜಿ ಅವರು ಊರ, ಪರವೂರ ಭಕ್ತರನ್ನು ಸೇರಿಸಿ, ಅವರ ಸಹಾಯದಿಂದ 1968ರಲ್ಲಿ ರಥ ನಿರ್ಮಾಣ ಕಾರ್ಯಕೈ ಗೊಂಡರು. 1969ರಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭಿಸುವುದು ಚಾರಿತ್ರಿಕ ದಾಖಲೆ. 1971ರಲ್ಲಿ ಒಳಾಂಗಣಕ್ಕೆ ಹಾಸುಗಲ್ಲು ಸಮರ್ಪಪಣೆ, 1975ರಲ್ಲಿ ಅರ್ಚಕರ ವಸತಿಗೃಹ, 1984ರಲ್ಲಿ ಪ್ರಥಮ ಅಷ್ಟಬಂಧ ಬ್ರಹ್ಮಕಲಶೋತ್ಸವ, 1997ರಲ್ಲಿ ಮಾಂಗಲ್ಯ ಮಂಟಪ ನಿರ್ಮಾಣ, 2006ರಲ್ಲಿ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ನಡೆದಿತ್ತು.
ಸೋಮವಾರ, ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಕ್ಷೇತ್ರಕ್ಕೆ ಭಕ್ತಾದಿ ಜನಸಾಗರವಾಗಿ ಆಗಮಿಸುತ್ತಾರೆ. ರುದ್ರಾಭಿಷೇಕ, ನೀರಾಭಿಷೇಕ, ರುದ್ರಪಾರಾಯಣ ಮೊದಲಾದ ಸೇವೆಗಳನ್ನು ಸಲ್ಲಿಸುತ್ತಾರೆ. ಡಿಸೆಂಬರ್‍ನಲ್ಲಿ ಕಾರ್ತಿಕ ಅಮಾವ್ಯಾಸೆ ಲಕ್ಷದೀಪೋತ್ಸವ, ಫೆಬ್ರವರಿಯಲ್ಲಿ ಮಹಾಶಿವರಾತ್ರಿ ಉತ್ಸವ, ಏಪ್ರಿಲ್‍ನಲ್ಲಿ ಮೇಷ ಸಂಕ್ರಮಣದಂದು ಆರಂಭಗೊಳ್ಳುವ ಐದು ದಿನಗಳ ಜಾತ್ರೋತ್ಸವ ವಿಜೃಂಭನೆಯಿಂದ ನಡೆಸಲಾಗುತ್ತಿದೆ. ನಾಡು, ಸಂಸ್ಕøತಿ, ಸಾಹಿತ್ಯ ಕಲೆಗಳನ್ನು ಪ್ರತಿಬಿಂಬಿಸುವ, ಹರಿಕಥೆ, ಯಕ್ಷಗಾನ, ತಾಳಮದ್ದಳೆ, ಪ್ರವಚನ, ಶಾಸ್ತ್ರೀಯ ಸಂಗೀತ, ನೃತ್ಯ, ದಾಸವಾಣಿ ಮುಂತಾದ ಕಾರ್ಯಕ್ರಮಗಳಿಗೆ ದೇವಸ್ಥಾನ ರಾಜಾಶ್ರಯ ನೀಡುತ್ತಿದೆ. ವೇದಾಧ್ಯಯನ, ವೇದಪ್ರಚಾರ, ಜ್ಞಾನಪ್ರಚಾರ, ಸಾಮೂಹಿಕ ಹಬ್ಬಹರಿದಿನಗಳ ಆಚರಣೆ, ವಿವಾಹಬಂಧನಗಳು ನಡೆಯುತ್ತಿವೆ. ಬೇಸಿಗೆ ರಜಾದಿನಗಳಲ್ಲಿ ವಿದ್ಯಾರ್ಥಿಗಳಿಗೆ ವೇದಪಾಠವನ್ನು ಉಚಿತವಾಗಿ ನಡೆಸಲಾಗುತ್ತಿದೆ.
ಇದೀಗ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಶಿಲಾಮಯ ಹೊರಪೌಳಿ ಹಾಗೂ ರಾಜಗೋಪುರ ಪುನರ್ನಿಮಿಸುವ ಕಾಮಗಾರಿಯನ್ನು 2.50ಕೋಟಿರೂ ವೆಚ್ಚದಲ್ಲಿ ನಡೆಸಲಾಗುತ್ತಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಸಂತ ರಾವ್ ಜೋಡುಮಾರ್ಗ , ಮೀನಾಕ್ಷಿ.ವಿ.ರಾವ್ ಜೋಡುಮಾರ್ಗ,ಜಗದೀಶ್ ಹೊಳ್ಳ,ಕಂದೂರು ಪರಮೇಶ್ವರ ಐತಾಳ್,ರಾಮಚಂದ್ರ ರಾವ್ ಬಿ.ಸಿ.ರೋಡು ಮೊದಲಾದವರಿದ್ದರು.
