ಸುದ್ದಿ9 ಬಂಟ್ವಾಳ : ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಾಲಯವು ಜೀರ್ಣೋದ್ಧಾರಗೊಳ್ಳುತ್ತಿದ್ದು ನವೀಕರಣದೊಂದಿಗೆ ಪುನರ್‍ನಿರ್ಮಾಣಗೊಳ್ಳುತ್ತಿದೆ.
ನಿಸರ್ಗ ರಮಣೀಯ ಪ್ರದೇಶದಲ್ಲಿರುವ ಈ ದೇವಸ್ಥಾನ ಸುಮಾರು 800 ವರ್ಷದ ಇತಿಹಾಸ ಹೊಂದಿದೆ. ಅಜಿಲ ಅರಸರ ಪತ್ರವಾಹಕ ಬಿಳಿ ಹುಂಜವೊಂದು ಈ ಪ್ರದೇಶದಲ್ಲಿ ಕೂಗಿದ್ದರಿಂದ ಇಲ್ಲಿಗೆ ಪೂಂಜ ಎಂದು ಹೆಸರಾಯಿತೆಂದೂ, ಹಿಂದೆ ಅಜ್ಜಿಬೆಟ್ಟು ಮತ್ತು ಆರಂಬೋಡಿ ಗ್ರಾಮದ ಗಡಿಯಲ್ಲಿರುವ ಗುಡ್ಡದಲ್ಲಿ ಈ ದೇವಸ್ಥಾನ ಇದ್ದು ದೇವರ ಸಂಬಂಧವಾದ ಘರ್ಷಣೆಯನ್ನು ನಿವಾರಿಸಲು ಎಲಿಯಮಾಗಣೆಯ ಅರಸರು ಪ್ರಜೆಗಳ ಸಮೇತ ಈಗಿರುವ ಈ ಸ್ಥಳದಲ್ಲಿ ಶ್ರೀ ದೇವಿಯನ್ನು ಪ್ರತಿಷ್ಠೆ ಮಾಡಿ ದೇವಸ್ಥಾನ ನಿರ್ಮಿಸಿದರೆಂದು ಪ್ರತೀತಿ ಇದೆ. ಇದೀಗ ಎಲಿಯ ಸಾರಾವಳಿ ಸೀಮೆ-ಎಲಿಯಮಾಗಣೆಯ ಆರಂಬೋಡಿ, ಎಲಿಯನಡುಗೋಡು, ಸಂಗಬೆಟ್ಟು , ಕಣಿಯೂರು, ಕುಕ್ಕಿಪ್ಪಾಡಿ ಗ್ರಾಮಗಳ ಆರಾಧ್ಯ ದೇವರ ದೇವಸ್ಥಾನ.
ಬದಲಾದ ಕಾಲಘಟ್ಟದಲ್ಲಿ ಪೂಂಜ ಆಸ್ರಣ್ಣ ಮನೆತನವು ಮೊಕ್ತೇಸರಿಕೆಯ ಅ„ಕಾರವನ್ನು ಪಡೆದು ಗ್ರಾಮಗಳ ಆಸ್ತಿಕರ ಆಡಳಿತ ಮಂಡಳಿಯೊಂದಿಗೆ ಮುನ್ನಡೆದು ಇದೀಗ ಸರಕಾರದ ಸೂತ್ರದಂತೆ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿ ವ್ಯವಸ್ಥಾಪನ ಮಂಡಳಿಯ ಅ„ೀನದಲ್ಲಿ ದೇವಸ್ಥಾನದ ಕಾರ್ಯಗಳು ನಡೆಯುತ್ತಿದೆ. ಅನಂತ ಆಚಾರ್ಯ ಅವರು ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಿ, ಕೊಡಮಣಿತ್ತಾಯ, ಮುಜಿಲಯ ದೈವಗಳನ್ನು ಪೂಜಿಸಲಾಗುತ್ತಿದೆ. ಶ್ರೀ ದೇವಿಗೆ ಹರಕೆ ಸಲ್ಲಿಸಿದರೆ ವಿವಾಹ, ಸಂತಾನ, ಉದ್ಯೋಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಜಾತ್ರಾ ಉತ್ಸವದಲ್ಲಿ ಚೆಂಡು ಕುಟ್ಟುವ ವಿಶೇಷ ಸಂಪ್ರದಾಯವಿದೆ.
1998ರಲ್ಲಿ ಅಷ್ಟಬಂಧ ಬ್ರಹ್ಮಕಲಶಾದಿ ಉತ್ಸವಗಳು ಜರುಗಿದ್ದು , ಗರ್ಭಗುಡಿಯ ಕೆಳ ಅಂತಸ್ತಿನ ತಾಮ್ರದ ಹೊದಿಕೆ, ಭೋಜನ ಶಾಲೆ, ಅಂಗಳಕ್ಕೆ ಕಾಂಕ್ರಿಟೀಕರಣ, ಗಾಳಿಗೋಪುರ ನಿರ್ಮಾಣದಂತಹ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಪ್ರಕೃತ ಸುತ್ತು ಪೌಳಿಯ ಮತ್ತು ಪ್ರಧಾನ ಗೋಪುರ ಹಾಗೂ ವಸಂತ ಮಂಟಪದ ಪುನರ್‍ನಿರ್ಮಾಣದ ಕಾರ್ಯಕ್ಕೆ ಸಂಕಲ್ಪಿಸಿದ್ದು , ಕಾಮಗಾರಿ ಆರಂಭಗೊಂಡಿದೆ. ಇದಕ್ಕಾಗಿ ಎರಡೂವರೆ ಕೋಟಿ ರೂ. ವೆಚ್ಚದ ಯೋಜನೆ ಅಂದಾಜಿಸಲಾಗಿದೆ. 2015ರ ಎಪ್ರಿಲ್‍ನಲ್ಲಿ ಬ್ರಹ್ಮ ಕಲಶೋತ್ಸವ ನಡೆಸುವ ಯೋಚನೆ ಹೊಂದಿದೆ. ಇದಕ್ಕಾಗಿ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಕಾರ್ಯನಿರತವಾಗಿದೆ.
ದೇಣಿಗೆ ನೀಡ ಬಯಸುವವರು ವಿಜಯ ಬ್ಯಾಂಕ್ ಸಿದ್ಧಕಟ್ಟೆ ಶಾಖೆಯ ಜೀರ್ಣೋದ್ಧಾರ ಸಮಿತಿ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ ಪೂಂಜ ಉಳಿತಾಯ ಖಾತೆ ನಂಬ್ರ 119801011001745 ಕ್ಕೆ ಕಳುಹಿಸಬಹುದೆಂದು ಸಮಿತಿ ತಿಳಿಸಿದೆ.

