ಸುದ್ದಿ9 ಬಂಟ್ವಾಳ: ಸಜೀಪನಡು, ಮಂಚಿ ಹಾಗೂ ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಹೊಂದಿರುವ ಕಂಚಿನಡ್ಕ ಪದವು ತೆರಳುವ ಹಾದಿಯಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಕಂಚಿನಡ್ಕ ಪದವು ತೆರಳುವ ದಾರಿ ಬಳಿ ಕುಕ್ಕಜೆಯಿಂದ ಒಂದು ಕಿ.ಮೀ.ದೂರದಲ್ಲಿರುವ ಕಂದಕ ಪ್ರದೇಶದಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆದಿರುವುದರಿಂದ ಪರಿಸರವಿಡೀ ದುರ್ನಾತ ಬೀರುತ್ತಿದೆ. ತ್ಯಾಜ್ಯದ ಮೇಲೆ ಹುಳಗಳು ಉಂಟಾಗಿ ಪರಿಸರವಿಡೀ ವ್ಯಾಪಿಸಿಕೊಳ್ಳುತ್ತಿದೆ. ಇದರಿಂದಾಗಿ ಸ್ಥಳೀಯರಲ್ಲಿ ರೋಗ ಭೀತಿಯೂ ಉಂಟಾಗಿದೆ. ಕೋಳಿ ತ್ಯಾಜ್ಯ ಎಸೆಯಲು ಈ ಪ್ರದೇಶವನ್ನು ಶಾಶ್ವತವಾಗಿ ಗುರುತಿಸಿಕೊಂಡಂತಿದ್ದು ಅಪಾರ ಪ್ರಮಾಣದಲ್ಲಿ ಇಲ್ಲಿ ತ್ಯಾಜ್ಯ ಕಂಡು ಬಂದಿದೆ.
ನಿರ್ಜನ ಪ್ರದೇಶ ಇದಾಗಿರುವುದುರಿಂದ ಕೋಳಿ ಅಂಗಡಿದಾರರು ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸದೇ ಇಲ್ಲೇ ಎಸೆದು ಹೋಗುತ್ತಿದ್ದಾರೆ. ರಸ್ತೆ ಪಕ್ಕ ಕೋಳಿ ಗರಿಗಳು ಹಾಗೂ ತ್ಯಾಜ್ಯಗಳು ಬಿದ್ದುಕೊಂಡು ರಸ್ತೆ ಮೂಲಕ ಸಂಚರಿಸುವ ಪ್ರಯಾಣಿಕರು ಅಸಹ್ಯ ಪಟ್ಟುಕೊಳ್ಳುವಂತಾಗಿದೆ.
ಇದೇ ರಸ್ತೆಯ ಮೂಲಕ ಬಂಟ್ವಾಳ ಪುರಸಭೆಯ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ಘಟಕಕ್ಕೆ ತೆರಳ ಬೇಕಾಗಿದೆ. ಸರ್ಕಾರದ 22 ಅಂಶಗಳನ್ನು ಪಾಲನೆ ಮಾಡದೆ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಕಸ ಎಸೆಯಬಾರದು ಎಂದು ಪಟ್ಟು ಹಿಡಿದಿರುವ ಜನಪ್ರತಿನಿಧಿಗಳು ರಸ್ತೆ ಬದಿಯೇ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದಿರುವ ಬಗ್ಗೆ ಯಾಕೆ ಮೌನವಾಗಿದ್ದಾರೆ ಎನ್ನುವ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಈ ಪರಿಸ್ಥಿತಿಯನ್ನು ಗಮನಿಸಿಯಾದರೂ ರಾಜಕೀಯ ಬದಿಗಿಟ್ಟು ಘಟಕ ನಿರ್ಮಾಣಕ್ಕೆ ಆಸಕ್ತಿ ತೋರುವರೇ ಅಥವಾ ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳುವರೇ ಎನ್ನುವ ಮಾತುಗಳು ಕೇಳಿ ಬಂದಿದೆ.


