ಪುತ್ತೂರು: ಕುಂಬ್ರದಲ್ಲಿ ಜೀಪೊಂದು ಸೇತುವೆಗೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಸಹಿತ ಆರು ಮಂದಿ ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾ ಗಿದ್ದಾರೆ.
ಬೆಳ್ತಂಗಡಿ ತಾಲೂಕು ಮೊಗರು ಗ್ರಾಮದ ಬಾಂಗೇರು ನಿವಾಸಿ ನಾರಾ ಯಣ ಯಾನೆ ಕರಿಯ(50) ಮೃತಪಟ್ಟ ವ್ಯಕ್ತಿ. ಬಾಂಗೇರುವಿನಿಂದ ಸಂಬಂಧಿ ಕರು ಪಳ್ಳತ್ತುರಿನ ದೇವಸ್ಥಾನವೊಂದಕ್ಕೆ ಹೋಗಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ವೇಳೆ ಜೀಪು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಬಳಿಕ ತಡೆಗೋಡೆಗೆ ತಾಗಿ ಕೊಂಡೇ ಮುಂದೆ ಸಾಗಿ, ತುಸು ದೂರದಲ್ಲಿ ರಸ್ತೆ ಬದಿಯ ಧರೆಗೆ ಅಪ್ಪಳಿಸಿ ನಿಂತಿದೆ. ನಾರಾಯಣ ಯಾನೆ ಕರಿಯ ಅವರ ತಲೆ ಸೇತುವೆ ತಡೆಗೋಡೆಗೆ ಬಡಿದು ಅಪ್ಪಚ್ಚಿಯಾಗಿ ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದು ಜೀಪಿನಲ್ಲಿದ್ದ ಮೊಗರು ಗ್ರಾಮದ ನಾಯಿಮಾರ್ ಕಂಚಿನಡ್ಕ ದಿ. ಕಾಂಟ್ಯಾರವರ ಪತ್ನಿ ಸುಬ್ಬಿ(70), ಪುತ್ರ ಡೊಂಬಯ್ಯ(40), ಗಿರಿಯಪ್ಪ(38), ಸಕಲೇಶಪುರ ಕುಂಬ್ರಾಡಿ ಗ್ರಾಮದ ಮಠದಿನ್ನೆ ನಿವಾಸಿ ಮೋಹನ ಪುತ್ರಿ ಸಿಂಚನ, ಸೌಮ್ಯ, ಮೀನಾಕ್ಷಿ ಗಾಯಗೊಂಡು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದಾರೆ.
`ಪುತ್ತೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಬಸ್ಸೊಂದು ಸೈಡ್ ಕೊಡದೇ ಇದ್ದುದನ್ನು ಗಮನಿಸಿ ಇನ್ನೇನು ಮುಖಾಮುಖಿ ಡಿಕ್ಕಿ ಸಂಭವಿಸುತ್ತದೆ ಎಂದರಿತು ಅದನ್ನು ತಪ್ಪಿಸುವ ಯತ್ನದಲ್ಲಿ ಅಪಘಾತ ಸಂಭವಿಸಿದೆ. ಕರಿಯ ಅವರು ಜೀಪಿನ ಎದುರು ಸೀಟಿನಲ್ಲಿ ಕುಳಿತುಕೊಂಡಿದ್ದರು’ ಎಂದು ಜೀಪು ಚಾಲಕ, ಉಪ್ಪಿನಂಗಡಿ ಸಮೀಪದ ಬಂದಾರು ಊಂತನಾಜೆ ನಿವಾಸಿ ರುಕ್ಮಯ್ಯ ಹೇಳಿದ್ದಾರೆ.


