ಮೋದಿ ಅಧಿಕಾರಕ್ಕೆ ಬಂದ ನಂತರ ಒಂದಲ್ಲಾ ಒಂದು ರೀತಿ ಸುದ್ದಿಯಾಗುತ್ತಿರುವ ವಿಶ್ವ ಹಿಂದೂ ಪರಿಷತ್ ಇದೀಗ ತನ್ನ ‘ಹಿಮಾಲಯ ಧ್ವನಿ’ ಎಂಬ ಪತ್ರಿಕೆಯಲ್ಲಿ ಕರೀನಾ ಕಪೂರ್ ಭಾವಚಿತ್ರ ಬಳಸಿ ವಿವಾದಕ್ಕೀಡಾಗಿದೆ.
ಲವ್ ಜಿಹಾದ್ ಗೆ ಸಂಬಂಧಿಸಿದ ಲೇಖನವನ್ನು ಈ ಬಾರಿ ಹಿಮಾಲಯ ಧ್ವನಿ ಪತ್ರಿಕೆ ಪ್ರಕಟಿಸಿತ್ತು. ಈ ಲೇಖನಕ್ಕೆ ಪೂರಕವಾಗಿ ನಟಿ ಕರೀನಾ ಕಪೂರ್ ಚಿತ್ರವನ್ನು ವಿಡಂಬನಾತ್ಮಕವಾಗಿ ಬಳಸಲಾಗಿದ್ದು ಲವ್ ಜಿಹಾದ್’ಗೆ ಕೇವಲ ಸಾಮಾನ್ಯ ಜನರು ಮತ್ತು ಮುಗ್ಧರಷ್ಟೇ ಅಲ್ಲ ವಿಚಾರವಂತರೂ ಬಲಿಯಾಗುತ್ತಿದ್ದಾರೆ ಎನ್ನುವ ಮೂಲಕ ವಿವಾದದ ಅಲೆ ಎಬ್ಬಿಸಿದೆ.
ಅಲ್ಲದೇ ಈ ಲೇಖನಕ್ಕೆ ಸಂಬಂಧಿಸಿದಂತೆ ನಟಿ ಕರೀನಾ ಕಪೂರ್ ಅವರ ಭಾವಚಿತ್ರಕ್ಕೆ ಗ್ರಾಫಿಕ್ಸ್ ಬುರ್ಖಾ ಜೋಡಿಸಿದ್ದು, ಜತೆ ಜತೆಗೆ ‘ಘರ್ ವಾಪಸಿ’ ಅಭಿಯಾನವನ್ನು ಪತ್ರಿಕೆ ಸಮರ್ಥಿಸಿಕೊಂಡಿದೆ. ವಿಎಚ್ಪಿಯ ಈ ಧೋರಣೆಗೆ ಕರೀನಾ ಅವರ ಅಭಿಮಾನಿಗಳೂ ಸೇರಿದಂತೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

