ಚಿತ್ರಕಲೆಯಿಂದ ಸಮುದಾಯದ ತುಮುಲ ಅಭಿವ್ಯಕ್ತಗೊಳ್ಳಲಿ
ಸುದ್ದಿ9 ಮೂಡುಬಿದರೆ: ಚಿತ್ರಕಲೆ ಎನ್ನುವುದು ಕಲಾವಿದನೊಬ್ಬನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾದರೂ, ಅದು ಸಮುದಾಯ ಹತಾಶೆ, ತುಮುಲಗಳನ್ನು ಅಭಿವ್ಯಕ್ತಗೊಳಿಸುವಂತಾಗಬೇಕು ಎಂದು ಮಣಿಪಾಲ ಮೈಸ್ ಕಾಲೇಜಿನ ಸಂವಹನ ವಿಭಾಗದ ಮುಖ್ಯಸ್ಥ ವರದೇಶ್ ಹಿರೆಗಂಗೆ ಹೇಳಿದರು.
ಆಳ್ವಾಸ್ ವಿರಾಸತ್ 2015 ಅಂಗವಾಗಿ 5 ದಿನಗಳ ಕಾಲ ನಡೆಯುವ ಆಳ್ವಾಸ್ ವರ್ಣವಿರಾಸತ್-2015ಕ್ಕೆ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಕಲೆಗೋಸ್ಕರ ಕಲೆ ಹಾಗೂ ಉದ್ದೇಶವಿಟ್ಟುಕೊಂಡು ಕಲೆಯನ್ನು ಸೃಷ್ಠಿ ಮಾಡುವಂತಹ ಎರಡು ವಿಭಿನ್ನ ಪ್ರಯತ್ನಗಳು ಚಿತ್ರಕಲೆಯಲ್ಲಿದೆ. ಪಾಶ್ಚತ್ಯ ಸಮಕಾಲೀನ ಚಿತ್ರಕಲೆಗೆ ಹೋಲಿಸಿದರೆ ಭಾರತೀಯ ಸಮಕಾಲೀನ ಚಿತ್ರಕಲೆ ಭಿನ್ನ. ಪೂರ್ವ ಅಧುನಿಕ, ವರ್ತಮಾನಗಳೊಂದಿಗೆ ಮಿಳಿತವಾಗಿ ಭಾರತೀಯ ಸಮಕಾಲೀನ ಚಿತ್ರಕಲೆ ಕಲಾವಿದರ ಕುಂಚದಿಂದ ಆರಳುತ್ತಿದೆ. ವಿಶಿಷ್ಟ ಸಮಕಾಲೀನ ಚಿತ್ರಕಲೆಯಿಂದ ಭಾರತೀಯ ಚಿತ್ರಕಲೆ ಮತ್ತಷ್ಟು ಶ್ರೀಮಂತಗೊಂಡಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವರ್ಣವಿರಾಸತ್, ಚಿತ್ರಸಿರಿ ಮೂಲಕ ವಿದ್ಯಾರ್ಥಿಗಳಲ್ಲಿ ಚಿತ್ರಕಲೆ ಆಸಕ್ತಿ ಮೂಡಿಸಿ, ಅವರನ್ನು ಮಾನಸಿಕವಾಗಿ ಸತ್ಚಿಂತನೆಗಳತ್ತ ಕೊಂಡೊಯ್ಯುವ ಪ್ರಯತ್ನವಾಗಿದೆ. ಶಿಬಿರಗಳಲ್ಲಿ ಸಂಗ್ರಹವಾದ ಕಲಾವಿದರ ಅಪೂರ್ವ ಕಲಾಕೃತಿಯನ್ನು ಸಂಸ್ಥೆಯು ಎಂದಿಗೂ ವ್ಯವಹಾರಿಕವಾಗಿ ಬಳಸಿಕೊಳ್ಳುವುದಿಲ್ಲ. ವಸ್ತು ಸಂಗ್ರಾಹಲಯವೊಂದನ್ನು ಸ್ಥಾಪಿಸಿ, ಅದರಲ್ಲಿ ಎಲ್ಲ ಕಲಾಕೃತಿಗಳನ್ನು ಪ್ರದರ್ಶನಕ್ಕಿಡುವ ಯೋಜನೆ ಸಂಸ್ಥೆಯ ಮುಂದಿದೆ ಎಂದರು.ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ನಿತೇಶ್ ಕಾರ್ಯಕ್ರಮ ನಿರೂಪಿಸಿದರು. ಸಮಕಾಲೀನ ಕಲಾವಿದರು: ವರ್ಣವಿರಾಸತ್ ಭಾಗವಾಗಿ ಆಳ್ವಾಸ್ ವರ್ಣವಿರಾಸತ್ನಲ್ಲಿ 15 ಕಲಾವಿದರು ಭಾಗವಹಿಸಲಿದ್ದಾರೆ. ಅನ್ಬುಜಗಂ.ಆರ್( ಪಾಂಡಿಚೇರಿ), ಅನು ಅರೋರಾ( ಹರ್ಯಾಣ), ಪಲ್ಲಬಿ ಶರ್ಮ(ಅಸ್ಸಾಂ), ಪ್ರವೀಣ್ ಕುಮಾರ್( ಕರ್ನಾಟಕ), ಕರುಣಾಕರ ಶೆಟ್ಟಿ(ಕರ್ನಾಟಕ),ಶಾಮ್ ಭರತ್ ಯಾದವ್(ಅಂಧ್ರ ಪ್ರದೇಶ), ಉದಯ.ಡಿ.ಜೈನ್( ಕರ್ನಾಟಕ ), ಅಣಿಷೇಕ್.ಎಸ್.ಆಚಾರ್ಯ(ಮಹಾರಾಷ್ಟ್ರ), ಬಿಂದು.ಎಂ.ಎಸ್(ಕೇರಳ), ಬಿ.ಎಸ್.ದೇಸಾಯಿ(ಹಾಸನ), ದೇವದಾಸ್ ಶೆಟ್ಟಿ( ಮುಂಬೈ), ನಳಿನ್ ಬಾಬು(ಕೇರಳ), ರೂಪಾ.ಬಿ.ಆರ್( ಕರ್ನಾಟಕ), ಸದಾನಂದ.ಸಿ(ಕೇರಳ), ವಿನೋದ್(ಕೇರಳ) ಶಿಬಿರದಲ್ಲಿ ಭಾಗವಹಿಸುವ ಸಮಕಾಲೀನ ಕಲಾವಿದರಾಗಿದ್ದಾರೆ.


