ಸುದ್ದಿ9 ಮೂಡುಬಿದರೆ: ಮೂಡುಬಿದಿರೆ ರೇಂಜ್ನ ಮೀಸಲು ಅರಣ್ಯ ಪ್ರದೇಶ ಯುವಜನಸೇವೆ, ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಸೋಮವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ, ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಮೂಡುಬಿದರೆ ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್ ಸ್ವಾಗತಿಸಿ ಬೆಳ್ತಂಗಡಿ ತಾಲೂಕಿನ ಮೂಡುಬಿದರೆ ರೇಂಜ್ಗೆ ಒಳಪಟ್ಟ ನಾರಾವಿ ಕುತ್ಲೂರಿನಲ್ಲಿರುವ ಎರಡೂವರೆ ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಬೆಳೆಸುತ್ತಿರುವ 39 ಬಗೆಯ ನರ್ಸರಿ ಗಿಡಗಳನ್ನು ಅಭಿವೃದ್ಧಿ ಮಾಡಿರುವ ಬಗ್ಗೆ ಮಾಹಿತಿನೀಡಿದರು.
ಕಳೆದ ವರ್ಷ ಶಿರ್ತಾಡಿ- ಹೊಸ್ಮಾರು ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಮರಗಳನ್ನು ತೆಗೆಯಲಾಗಿದ್ದು ಇದೀಗ ಮತ್ತೆ ಮರವೊಂದಕ್ಕೆ 5ರಂತೆ ಒಟ್ಟು ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸಲಾಗಿದೆ, ದರಗುಡ್ಡೆ-ವಾಲ್ಪಾಡಿ ಮೀಸಲು ಅರಣ್ಯ ಪ್ರದೇಶದ ಭಾಗದಲ್ಲಿರುವ ರೈತರಿಗೆ ಕೃಷಿಗೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯ ಜಾಗದಲ್ಲಿರುವ ಮೂರು ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡುವ ಮೂಲಕ ನೀರು ಸಂಗ್ರಹವಾಗುವಂತೆ ಮಾಡಲಾಗಿದೆ. ಹಾಗೂ ಇದೇ ಪ್ರದೇಶದಲ್ಲಿ ಕಾಂಪಾ ಯೋಜನೆಯಡಿ 10 ಹೆಕ್ಟೆರ್ ಪ್ರದೇಶದಲ್ಲಿ ನಿರ್ಮಿಸಿರುವ ನೆಡುತೋಪುಗಳನ್ನು ಸಹಿತ ಇತರ ಅಭಿವೃದ್ಧಿ ಕಾರ್ಯಗಳನ್ನು ಸಚಿವರು ವೀಕ್ಷಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಅರಣ್ಯ ಇಲಾಖೆಯ ಮೂಡುಬಿದರೆ ರೇಂಜ್ನ ವತಿಯಿಂದ ತನ್ನ ಕ್ಷೇತ್ರಕ್ಕೆ ಬರುವ ಅರಣ್ಯ ಪ್ರದೇಶದಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ್ದೇನೆ. ಕುತ್ಲೂರು ನರ್ಸರಿಯಲ್ಲಿ ಪಕ್ಷಿಗಳಿಗೆ ಆಹಾರವಾಗುವಂತಹ ಮಾವು, ಹಲಸು, ಕೋಕಮ್ (ಪುನರ್ಪುಳಿ) ಸಹಿತ ಇತರ ಗಿಡಗಳನ್ನು ಬೆಳೆಸಿರುವ ಬಗ್ಗೆ ಪ್ರಶಂಸಿದ ಅವರು ಮೂಡುಬಿದರೆಯ ಕಡಲಕೆರೆ ಪ್ರದೇಶದಲ್ಲಿಯೂ ಅರಣ್ಯ ಇಲಾಖೆಯ ವತಿಯಿಂದ ಹೆಚ್ಚಿನ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು.
ಶಿರ್ತಾಡಿ ಉಪ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್.ಕೆ, ಮೂಡುಬಿದರೆ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್, ಪ್ರಕಾಶ್ ಶೆಟ್ಟಿ, ಹೊಸ್ಮಾರಿನ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಬಜಗೋಳಿ ವಿಭಾಗದ ಪ್ರಮೋದ್ ಹಾಗೂ ಅರಣ್ಯ ರಕ್ಷಕರು, ಸಿಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



