ಸುದ್ದಿ9 ಮೂಡುಬಿದರೆ: ಹೊಸನಾಡು ಕೊಡ್ಯಡ್ಕ ಶ್ರೀದೇವೀ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಅಯ್ಯಪ್ಪ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮೀ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಸೋಮವಾರ ನಡೆಯಿತು.
ಶ್ರೀಕ್ಷೇತ್ರದ ತಂತ್ರಿ ಎಡಪದವು ತೆಂಕುಮನೆ ನಾರಾಯಣ ತಂತ್ರಿ ಹಾಗೂ ವೈದಿಕ ವೃಂದದವರಿಂದ ಸಪರಿವಾರ ಶ್ರೀದೇವೀ ಅನ್ನಪೂರ್ಣೇಶ್ವರೀಗೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಅಯ್ಯಪ್ಪ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪಲ್ಲಪೂಜೆ ನಡೆದವು.
ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರ ಅಶೀವರ್ಚನ ನೀಡಿದರು. ಅನ್ನ ನೀಡುವ ಅನ್ನಪೂರ್ಣೇಶ್ವರಿ, ಶಕ್ತಿಯ ಸಂಕೇತವಾಗಿರುವ ಹನುಮನಿರುವ ಹೊಸನಾಡಿನಲ್ಲಿ ಅಯ್ಯಪ್ಪ ಪ್ರತಿಷ್ಠಾಪನೆ ಶುದ್ಧವ್ರತನಿಯಮಗಳ ಪಾಲನೆಗೊಂದು ಸನ್ಮಾರ್ಗ. ಶುದ್ಧವ್ರತನಿಯಮ ಪರಿಪಾಲನೆಯಿಂದ ನಮ್ಮಲ್ಲಿರುವ ದುಶ್ಚಟ ದೂರವಾಗುತ್ತದೆಎಂದರು.
ಶ್ರೀಕ್ಷೇತ್ರ ಕೊಡ್ಯಡ್ಕದ ಆಡಳಿತ ಮೊಕ್ತೇಸರ ಡಾ.ಕೊಡ್ಯಡ್ಕ ಜಯರಾಮ ಹೆಗ್ಡೆ, ಮೂರ್ತಿ ಶಿಲ್ಪಿ ಸದಾಶಿವನ್ ಆಚಾರ್ ಕೇರಳ, ಮಂದಿರದ ವಾಸ್ತುಶಿಲ್ಪಿ, ಶಿಲ್ಪಗುರು ದಿ.ಶಿಲ್ಪಿ ಶಾಮರಾಯ ಆಚಾರ್ಯರ ಪುತ್ರ ಶಿಲ್ಪಿ ಕೆ. ಸತೀಶ ಆಚಾರ್ಯ ಕಾರ್ಕಳ, ಚೌಟರ ಅರಮನೆ ಕುಲದೀಪ ಎಂ., ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಪ್ರ. ಅರ್ಚಕ ಅಡಿಗಳ್ ಶ್ರೀನಿವಾಸ ಭಟ್, ಕೊಡ್ಯಡ್ಕ ಶಿವರಾಮ ಹೆಗ್ಡೆ , ಮೂಡಬಿದರೆ ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ ಮೊದಲಾದವರು ಉಪಸ್ಥಿತರಿದ್ದರು.

