ನಾಗರಿಕ ಮತ್ತು ಸಚಿವರ ಮಧ್ಯೆ ಅಸಂವಿಧಾನಿಕ ಪದ ಬಳಕೆ
ಸುದ್ದಿ9 ಮೂಡುಬಿದರೆ: ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿರುವ 25ಲಕ್ಷ ರೂ. ಅನುದಾನದಲ್ಲಿ ಮೂಡುಬಿದರೆ ಹಳೆ ಪೊಲೀಸ್ ಠಾಣೆಯ ಬಳಿಯಿಂದ ಮಹಾವೀರ ಭವನದ ವರೆಗಿನ ರಸ್ತೆಗೆ ಅಳವಡಿಸುವ ಇಂಟರ್ಲಾಕ್ಗೆ ಸೋಮವಾರ ಶಂಕುಸ್ಥಾಪನೆ ಮಾಡಲಾಯಿತು.
ಸಚಿವ ಕೆ.ಅಭಯಚಂದ್ರ ಸೋಮವಾರ ಮಹಮ್ಮಾಯಿ ದೇವಸ್ಥಾನದ ಬಳಿ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿ ನಾಗರಿಕ ಮತ್ತು ಸಚಿವರ ಮಧ್ಯೆ ಅಸಂವಿಧಾನಿಕ ಪದ ಬಳಕೆಯಾದ ಘಟನೆ ನಡೆದಿದೆ.
ಇಂಟರ್ಲಾಕ್ಗೆ ಶಂಕುಸ್ಥಾಪನೆಗೈದು ಮಾತನಾಡಿದ ಸಚಿವ ಅಭಯಚಂದ್ರ ಅವರು ಇದೀಗ ಕಾರ್ಕಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಮತ್ತು ಅತ್ತೂರು ಜಾತ್ರೆಯ ಸಂದರ್ಭದಲ್ಲಿ ವಾಹನಗಳ ದಟ್ಟನೆ ಕಡಿಮೆ ಮಾಡಲು ರಿಂಗ್ರೋಡನ್ನು ಮಾಡಲಾಗುತ್ತದೆ. ಕಲ್ಸಂಕದಿಂದ ಮಹಾವೀರ ಭವನದವರೆಗೆ ವಾಹನಗಳ ಸುಲಭ ಚಾಲನೆಗೆ ರಸ್ತೆಗೆ ಇಂಟರ್ಲಾಕನ್ನು ಅಳವಡಿಸಲಾಗುತ್ತದೆ ಎಂದು ಹೇಳುತ್ತಿದ್ದಾಗ ಮಧ್ಯೆ ಮಾತನಾಡಿದ ನಾಗರಿಕ ಲಕ್ಷ್ಮಣ್ ಬನ್ನಡ್ಕ ಅವರು ಕೇವಲ ಇಲ್ಲಿ ಮಾತ್ರ ಅಗಲೀಕರಣವಾದರೆ ಸಾಲದು ಜೈನ ಪೇಟೆಯಲ್ಲಿರುವ ತಮ್ಮ ಮನೆಯ ಬಳಿಯೂ ರಸ್ತೆ ಅಗಲೀಕರಣವಾಗಬೇಕು ಇದನ್ನು ತಾವು ಮೊದಲು ಮಾಡಬೇಕಾಗಿದೆ ಎಂದು ಹೇಳಿದರು.
ಅಪ್ಪನ ಜಾಗವೇ?
ಈ ಸಂದರ್ಭದಲ್ಲಿ ಮಾತನಾಡಿದ ಅಭಯಚಂದ್ರ `ನೀನು ಯಾರು ಮೊದಲು ನಿನ್ನ ಮನೆಯ ಬಳಿ ಅಗಲೀಕರಣಗೊಳಿಸು. ನಿನ್ನ ಅಪ್ಪನ ಜಾಗವೇ? ಎಂದು ಅಭಯಚಂದ್ರ ಜೈನ್ ಪ್ರಶ್ನಿಸಿದಾಗ, ನನ್ನ ಮನೆಯ ಬಳಿ ಜಾಗ ಬಿಟ್ಟುಕೊಟ್ಟಿದ್ದೇನೆ ನೀವು ರಸ್ತೆಯ ಪಕ್ಕದಲ್ಲಿಯೇ ಮನೆ ನಿರ್ಮಿಸಿದ್ದೀರಲ್ಲಾ ಮೊದಲು ನೀವು ಅಲ್ಲಿ ಜಾಗ ಬಿಟ್ಟು ಕೊಡಿ ನೀವು ನನ್ನಪ್ಪನ ಹೆಸರು ಹೇಳಬೇಡಿ ಅದು ನಿಮ್ಮಪ್ಪನ ಜಾಗವೂ ಅಲ್ಲ ಎಂದು ಲಕ್ಷಣ್ ಎಂದರು. ಸ್ವಲ್ಪ ಹೊತ್ತು ಇಬ್ಬರ ಮಾತಿನ ಚಕಮಕಿ ನಡೆದಾಗ ಕಾರ್ಯಕರ್ತರು ಲಕ್ಷ್ಮಣ್ ಅವರನ್ನು ಅಲ್ಲಿಂದ ಕಳಿಸುವ ವ್ಯವಸ್ಥೆ ಮಾಡಿದಾಗ ಸಚಿವರಿಗೆ ದಿಕ್ಕಾರ ಎಂದರು ಅಲ್ಲದೆ ನಾನೂ ಶಾಸಕನಾಗಿ ಬರುತ್ತೇನೆ ಆಗ ನಾನು ನೋಡಿಕೊಳ್ಳುತ್ತೇನೆಂದು ಹೇಳಿ ಅಲ್ಲಿಂದ ಹೊರಟು ಹೋದರು.
ನಂತರ ಸಚಿವ ಅಭಯಚಂದ್ರ ಅವರು ಮೂಡುಬಿದರೆ ಪೊಲೀಸರಿಗೆ ಕರೆ ಮಾಡಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸುವ ಮೊದಲೇ ಮಂಗಳೂರಿನ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ ಲಕ್ಷ್ಮಣ್ ಅವರನ್ನು ಪೊಲೀಸರು ಮಿಜಾರು ಬಳಿ ಬಸ್ಸಿನಿಂದ ಇಳಿಸಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.
ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಉಪಾಧ್ಯಕ್ಷೆ ಎಲಿಜಾ ಮಿನೇಜಸ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ವಾಡರ್್ ಸದಸ್ಯ ಲಕ್ಷ್ಮಣ್ ಪೂಜಾರಿ, ಮುಖ್ಯಾಧಿಕಾರಿ ಶೀನ ನಾಯ್ಕ್, ಇಂಜಿನಿಯರ್ ದಿನೇಶ್ ಮತ್ತು ಪುರಸಭಾ ಸದಸ್ಯರು ಈ ಸಂದರ್ಭದಲ್ಲಿದ್ದರು.


