ಕುಂದಾಪುರ: ಕೊಲ್ಲೂರಿನ ಕೊಡಚಾದ್ರಿಯಿಂದ ಚಿಮ್ಮುವ ಜಲಪಾತ ( ಬೆಳ್ಕಲ್ ತೀರ್ಥ) ದುರ್ಗಮ ಕಾಡಿನ ಮಧ್ಯ ಕಂಗೊಳಿಸುತ್ತಿದ್ದು ಇದು ವನದೇವಿಯ ಮೈ ಮೇಲೆ ಬೆಳ್ಳಿಯ ಗೆರೆ ಮೂಡಿಸಿದಂತಿದೆ. 500ಕ್ಕೂ ಅಧಿಕ ಅಡಿ ಎತ್ತರದಿಂದ ಧುಮುಕುತ್ತಿರುವ ಈ ಜಲಪಾತ ಸೃಷ್ಟಿಕರ್ತನ ಒಂದು ಚಮತ್ಕಾರದಂತಿದ್ದು. ಈ ಜಲಪಾತದಲ್ಲಿ ಪ್ರತಿವರ್ಷ ಎಳ್ಳುಅಮಾವಾಸ್ಯೆಯ ದಿನ ತೀರ್ಥಸ್ನಾನ ಮಾಡಲು ಸಾವಿರಾರು ಜನರು ಬರುತ್ತಾರೆ. ಅಂತೆಯೇ ಸೋಮವಾರ ಬೆಳಿಗ್ಗೆನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡಿ ಪುನೀತರಾದರು.
ಕುಂದಾಪುರದಿಂದ 60 ಕಿ.ಮೀ.ಗೂ ಅಧಿಕ ದೂರವಿರುವ ಈ ಬೆಳ್ಕಲ್ ಚಾರಣ ಕೊಲ್ಲೂರು ಮಾರ್ಗದಲ್ಲಿ ಜಡ್ಕಲ್ನಿಂದ ಪೂರ್ವಾಭಿಮುಖವಾಗಿ ಸುಮಾರು 25ಕಿ.ಮೀ ದೂರದಲ್ಲಿ ಇರುವ ಉದಯ ನಗರದಿಂದ ಸುಮಾರು 8 ಕಿ.ಮೀ ದೂರದ ದಟ್ಟ ಕಾನನದ ಮಧ್ಯ ಇರುವ ಈ ನೈರ್ಸಗಿಕ ಸೊಬಗು ಚಾರಣ ಪ್ರಿಯರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಆದರೆ ಈ ತೀರ್ಥದ ಬಳಿ ತೆರಳುವುದು ಮಾತ್ರ ಸುಲಭ ಸಾಧ್ಯವಲ್ಲ, ಇಲ್ಲಿಗೆ ಸಾಗಬೇಕಾದರೆ ಕಾಲು ದಾರಿಯಲ್ಲಿ ಸುಮಾರು 5 ಕಿ.ಮೀ. ಕಾಡಿನಲ್ಲಿ ಗುಡ್ಡ, ಬಂಡೆಗಳ ನಡುವೆ ಸುಮಾರು ಒಂದು ಗಂಟೆ ಕಾಲ್ನಡಿಗೆಯ ಮೂಲಕ ತೀರ್ಥದ ಬಳಿ ತಲುಪಬೇಕಾಗಿದೆ. ಹಾದಿಯೂ ತೆರಳಲು ದುಸ್ತರವಾಗಿದ್ದು ಇದು ಮೂಲ ಸೌಕರ್ಯ ವಂಚಿತವಾಗಿ ಸೊರಗಿದೆ.
ಕಾರಣೀಕ ಸ್ಥಳ: ಈ ಬೆಳ್ಕಲ್ ತೀರ್ಥ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿದ್ದರು, ಇದೊಂದು ಕಾರಣೀಕ ಸ್ಥಳವಾಗಿದೆ. ಈ ತೀರ್ಥದಿಂದ 5 ಕಿ.ಮೀ ಹಿಂದೆ ವಿಶ್ವಂಭರ ಮಹಾಗಣಪತಿ ಗೋವಿಂದ ಮತ್ತು ಕೋಟಿಲಿಂಗೇಶ್ವರ ದೇಗುಲವಿದೆ. ಇದು ಸಹ ಹಲವು ವರ್ಷದ ಹಿಂದೆ ಬೆಳ್ಕಲ್ ತೀರ್ಥ ಜಲಪಾತವಿರುವ ಸ್ಥಳದಲ್ಲಿಯೇ ಇದ್ದಿತ್ತು. ಜಲಪಾತ ಇರುವ ಸ್ಥಳವು ತುಂಬಾ ದುರ್ಗಮವಾಗಿದ್ದು ಭಕ್ತರಿಗೆ ದೇವರ ದರ್ಶನ ಪಡೆಯುವುದು ತುಂಬಾ ಕಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅಲ್ಲಿರುವ ದೇವರನ್ನು ಸುಮಾರು 5 ಕಿ.ಮೀ ಹಿಂದೆ ದೇಗುಲ ಮಾಡಲಾಯಿತು ಎನ್ನಲಾಗುತ್ತಿದೆ. ಎಳ್ಳಮಾವಾಸ್ಯೆಯ ದಿನದ ತೀರ್ಥಸ್ನಾನದ ಬಳಿಕ ಈ ದೇವಾಲಯದಲ್ಲಿಯೂ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬರುವ ಭಕ್ತರಿಗಾಗಿ ಇಲ್ಲಿ ಮಧ್ಯಾಹ್ನ ಭೋಜನ ವ್ಯವಸ್ಥೆಯ್ನು ಮಾಡಲಾಗುತ್ತದೆ. ಬೆಳ್ಕಲ್ ತೀರ್ಥಸ್ನಾನ ಹಾಗೂ ದೇವರ ದರ್ಶನದ ಬಳಿಕ ಇಲಿಗೆ ಬರುವ ಭಕ್ತರು ಸಾಗುವುದು ಕ್ಷೇತ್ರದಿಂದ ಸುಮಾರು 15 ಕಿ.ಮೀ. ದೂರದ ಕೆರಾಡಿ ಸಮೀಪದ ಕೆರಾಡಿ ಮೂಡುಗಲ್ಲು ಗುಹಾಂತರ ದೇವಾಲಯಕ್ಕೆ. ಇಲಲಿ ತೀರ್ಥಸ್ನಾನದ ಬಳಿಕ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರೇ ಒಳಿತಾಗುತ್ತದೆ ಎನ್ನುವ ನಂಬಿಕೆ ಮೇರೆಗೆ ಈ ದೇವಸ್ಥಾನಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.
ಈ ಬೆಳ್ಕಲ್ ತೀರ್ಥವು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಎಳ್ಳಮಾವಾಸ್ಯೆಯ ದಿನದಂದು ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಅದರಂತೆ ಸಾವಿರಾರು ಭಕ್ತರು ಎಳ್ಳಮಾವಾಸ್ಯೆಯ ದಿನ ಎತ್ತರದಿಂದ ಧುಮುಕುತ್ತಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಾರೆ. ಆದರೇ ಮೇಲಿನಿಂದ ಕೆಳಕ್ಕೆ ಧುಮುಕುವ ತೀರ್ಥ ಕೆಳಗಡೆ ಇರುವ ಎಲ್ಲರ ಮೇಲೆ ತೀರ್ಥ ಬೀಳುತ್ತದೆ ಎಂದು ಹೇಳಲಾಗದು ಕೆಲವೊಮ್ಮೆ ಅದು ತನ್ನ ಪಥವನ್ನು ಬದಲಾಯಿಸುತ್ತದೆ ಎನ್ನುವುದು ಒಂದೆಡೆಯಾದರೇ ಹಾಗೂ ಧುಮುಕುವ ನೀರಿನು ಆಸ್ವಾದಿಸುತ್ತಾ ಭಕ್ತಿ ಭಾವದೊಂದಿಗೆ ಜನರು ಪುಳಕಿತರಾಗುವುದು ಇಲ್ಲಿನ ಇನ್ನೊಂದು ವಿಶೇಷ.
ಬೆಳ್ಕಲ್ ತೀರ್ಥಸ್ನಾನದಲ್ಲಿ ಪಾಲ್ಘೊಂಡ ಕೇಮಾರು ಶ್ರೀ
ಕುಂದಾಪುರ: ಕೊಡಚಾದ್ರಿಯ 64 ಪವಿತ್ರ ತೀರ್ಥಗಳಲ್ಲಿ ಒಂದಾಗಿರುವ ಬೆಳ್ಕಲ್ ತೀರ್ಥಕ್ಕೆ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಅವರ ಅನುಯಾಯಿಗಳು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿ ತೀರ್ಥಸ್ನಾನ ಮಾಡಿದರು.
ಕೊಡಚಾದ್ರಿ ಉಳಿಸಿ, ಸೌರ್ಪಣಿಕ ಉಳಿಸಿ ಹಾಗೂ ಪ್ಲಾಸ್ಟಿಕ್ ಮುಕ್ತ ಕೊಡಚಾದ್ರಿ ಹಾಗೂ ಬೆಳ್ಕಲ್ ತೀರ್ಥ (ಗೋವಿಂದ ತೀರ್ಥ) ಸಂಕಲ್ಪದೊಂದಿಗೆ ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್, ಆರೋಹಿ ಚಾರಣ ಸಂಘಟನೆ ಮಂಗಳೂರು, ಪಶ್ಚಿಮ ಘಟ್ಟ ಉಳಿಸಿ ಸಮಿತಿ, ಪರಶುರಾಮ ಸೇನೆ, ಯುವಜಾಗೃತಿ ಬಳಗ ಸೇರಿದಂತೆ ಸ್ಥಳೀಯ ಹಲವು ಸಂಘಟನೆಗಳ ಸಹಯೋಗದೊಂದಿಗೆ `ಕ್ಲೀನ್ ಕೊಡಚಾದ್ರಿ’ ಅಭಿಯಾನದ ಅಂಗವಾಗಿ `ಗೋವಿಂದ ತೀರ್ಥ ಸ್ನಾನ’ ಹಾಗೂ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 9.30ಕ್ಕೆ ಜಡ್ಕಲ್ ಮಾರ್ಗವಾಗಿ ಸ್ವಾಜಿ ಸಹಿತ ನೂರಾರು ಜನರು ಬೆಳ್ಕಲ್ ತೀರ್ಥಸ್ನಾನ ಘಟ್ಟಕ್ಕೆ ತೆರಳಿದ್ದು ಸುಮಾರು 5 ಕಿ.ಮೀ. ದೂರ ನಡೆದು ಸಾಗಲಾಯಿತು. ಈ ವೇಳೆ ಭಜನೆ, ದೇವರ ನಾಮ ಎಲ್ಲೆಡೆ ಮೊಳಗುತ್ತಿತ್ತು.
ಸುಮಾರು 12 ಗಂಟೆ ಸುಮಾರಿಗೆ ತೀರ್ಥಸ್ನಾನ ಘಟ್ಟಕ್ಕೆ ತೆರಳಿದ ಬಳಿಕ ಕೇಮಾರು ಶ್ರೀಗಳು ನೆರೆದ ಸಾವಿರಾರು ಭಕ್ತರು ಹಾಗೂ ಅನುಯಾಯಿಗಳ ಜೊತೆಗೂಡಿ ತೀರ್ಥಸ್ನಾನ ಮಾಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೇಮಾರು ಶ್ರೀಗಳು, ಗೋವಿಂದ ತೀರ್ಥ ಬಹಳ ಪ್ರಾಮುಖ್ಯವಾಗಿದ್ದು, ನಮಗೆ ಕೊಡಚಾದ್ರಿಯ ಎಲ್ಲಾ ತೀರ್ಥಕ್ಷೇತ್ರಗಳ ಸಂರಕ್ಷಣೆ ಮುಖ್ಯ ಗುರಿಯಾಗಿದೆ. ಭಕ್ತಿಯ ಜೊತೆಗೆ ಪ್ರಕೃತಿಯನ್ನು ಉಳಿಸುವ ಪ್ರಯತ್ನ ಇದಾಗಿದ್ದು, ಕೊಡಚಾದರಿಯಲ್ಲಿ ಫ್ಲಾಸ್ಟಿಕ್ ಮಯವಾಗಿದೆ. ಈ ಭಾಗದಲ್ಲಿ ಫ್ಲಾಸ್ಟಿಕ್ ಮುಕ್ತ ಮಾಡುವ ಬಗ್ಗೆ ಇಲಾಖೆ ಚಿಂತನೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ, ಉಡುಪಿ ಜಿಲ್ಲಾಡಳಿತ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಲಾಗುತ್ತದೆ. ಈ ಗೋವಿಂದ ತೀರ್ಥ ಸ್ನಾನ ಪವಿತ್ರ ಸ್ನಾನ ಎಂಬುದು ಎಲ್ಲರಿಗೂ ತಿಳಿಯಬೇಕು. ಈ ದಿನದಂದೇ ನಮ್ಮ ಅಭಿಯಾನದ ಮುಂದುವರಿದ ಭಾಗವನ್ನು ಇಲ್ಲಿ ನಡೆಸುತ್ತಿದ್ದೇವೆ.
ಸಾವಿರಾರು ಭಕ್ತರು ಈ ತೀರ್ಥಸ್ನಾನಕ್ಕೆ ಬಂದಿದ್ದಾರೆ. ಇದರಿಂದಾಗಿ ಅವರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಜಗತ್ತಿನಲ್ಲಿಯೇ ಶ್ರೇಷ್ಟವಾದ ಜೀವ ಸಂಕಲಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳ ರಕ್ಷಣೆ ಅಗತ್ಯ ಎಂದು ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕೆ.ಕೆ. ಸಾಬು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿಜಯ ಶಾಸ್ತ್ರೀ, ವಿಘ್ನೇಶ್ವರ ಶಾಸ್ತ್ರೀ, ಆರೋಹಿ ಸಂಘಟನೆಯ ಸಂಚಾಲಕ ಶಶಿಧರ ಬಂಗೇರ, ಚೈತ್ರೇಶ್, ಶಿವ, ಗಿರೀಶ್, ಮೋಹನ್, ತಾರಾನಾಥ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

.
















