ಬಂಟ್ವಾಳ: ವಾಸ್ತವ್ಯದ ಪುರಾವೆಗಾಗಿ ಅರ್ಹರಿಗೆ ಎಪಿಎಲ್ ಪಡಿತರ ಚೀಟಿ ತಕ್ಷಣ ಒದಗಿಸುವಂತೆ ಸಿದ್ದಕಟ್ಟೆ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಇರ್ಷಾದ್ ರಿಜ್ವಾನ್ ಅವರಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ನಕಲಿ ಬಿಪಿಎಲ್ ಪಡಿತರ ಚೀಟಿ ಹಾವಳಿಯ ನೆಪವೊಡ್ಡಿ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆಯಾಗದೇ, ಸಾವಿರಾರು ಕುಟುಂಬಗಳು ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯುಬಲ್ಲಿ ವಂಚಿತರಾಗಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ಇಲ್ಲದಿರುವ ಹಾಗೂ 1.20 ಲಕ್ಷ ರೂ. ಆದಾಯ ಮಿತಿಯ ನೆಪದಲ್ಲಿ ಲಕ್ಷಾಂತರ ಮಂದಿಗೆ ಬರುವ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ವೃದ್ದಾಪ್ಯಾ ವೇತನ, ವಿಕಲಚೇತನ ಇತ್ಯಾದಿ ಪಿಂಚಣಿ ಸೌಲಭ್ಯವನ್ನು ಸರಕಾರ ರದ್ದು ಮಾಡಿರುವ ಹಿನ್ನಲೆಯಲ್ಲಿ ಪಿಂಚಣಿಯ ಸಹಾಯದಿಂದ ಬದುಕು ಸಾಗಿಸುವ ವಯೋವೃದ್ದರು ಕಂಗಲಾಗಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ
ಇನ್ನೊಂದೆಡೆಯಲ್ಲಿ ಹಲವಾರು ಕೃಷಿ ಕುಟುಂಬಗಳು ವಾಸ್ತವ್ಯದ ಪುರಾವೆಗೆ ಬೇಕಾಗಿರುವ ಯಾವುದೇ ಪಡಿತರ ಚೀಟಿ ಹೊಂದಿಲ್ಲದೇ ಸಹಕಾರ ಸಂಘಗಳಲ್ಲಿ ಕೃಷಿ ಸಂಬಂಧ ಸಾಲ ಸೌಲಭ್ಯಗಳನ್ನು ಪಡೆಯುವಲ್ಲಿಯು ವಿಫಲರಾಗಿದ್ದಾರೆ.
ಆರ್ಥಿಕವಾಗಿ ಮಧ್ಯಮ ಸ್ಥಿತಿಯಲ್ಲಿರುವ ಕೃಷಿಕರಿಗೆ ಕೃಷಿ ಸಾಲ,ಸಣ್ಣ ವ್ಯಾಪಾರಸ್ತರಿಗೆ ಇನ್ನಿತರ ಸೌಲಭ್ಯ ಪಡೆಯಲು ವಾಸ್ತವ್ಯ ಪುರಾವೆಗೆ ಬೇಕಾಗಿರುವ ಎಪಿಎಲ್ ಪಡಿತರ ಚೀಟಿಯು ಆಹಾರ ಇಲಾಖೆಯಿಂದ ದೊರೆಯದಿದ್ದು,ಎಪಿಎಲ್ ಪಡಿತರ ನೀಡಲು ಇರುವ ಅಡ್ಡಿಯಾದರೂ ಏನು ಎಂದು ಎಪಿಎಲ್ ಪಡಿತರ ಚೀಟಿ ಅಪೇಕ್ಷಿತರು ಪ್ರಶ್ನಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಎಪಿಎಲ್ ಪಡಿತರ ಚೀಟಿಯನ್ನಾದರೂ ನಿರಂತರವಾಗಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಸಚಿವರನ್ನು ಒತ್ತಾಯಿಸಿದ್ದಾರೆ.ಇದರ ಪ್ರತಿಯನ್ನು ಸರಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಯುಕ್ತರು ಹಾಗೂ ದ.ಕ.ಜಿಲ್ಲಾಧಿಕಾರಿಗೂ ರವಾನಿಸಿದ್ದಾರೆ.
