ಬಂಟ್ವಾಳ: ಯಕ್ಷಕಲಾ ಪೊಳಲಿ ಇದರ 31ನೇ ವರ್ಧಂತ್ಯುತ್ಸವದ ಪ್ರಯುಕ್ತ “ಪೊಳಲಿ ಯಕ್ಷೇತ್ಸವ-2026” ಕಾರ್ಯಕ್ರಮವುಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ಪೊಳಲಿ ಆಡಳಿತ ಮಂಡಳಿ ಮತ್ತು ಊರ,ಪರವೂರ ಭಕ್ತರ ಸಹಕಾರದಲ್ಲಿ ಅಕ್ಟೋಬರ್ 11ರಂದು ಭಾನುವಾರ ನಡೆಯಲಿದೆ ಎಂದು ಯಕ್ಷಕಲಾ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಪೊಳಲಿ ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು
ಕಳೆದ ನಾಲ್ಕು ವರ್ಷಗಳಿಂದ ಯಕ್ಷಕಲಾ ಪೊಳಲಿ ವತಿಯಿಂದ “ಪೊಳಲಿ ಯಕೋತ್ಸವ” ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಈ ಬಾರಿ ಕಟೀಲು ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಅದೇರೀತಿ ಈ ವರ್ಷದಿಂದ ರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಸ್ಮೃತಿ ಗೌರವ ಪ್ರಶಸ್ತಿಯನ್ನು ಆರಂಭಿಸಲಾಗಿದ್ದು, ಹಿರಿಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. 15 ಮಂದಿ ಹಿರಿಯ ಕಲಾವಿದರಿಗೆ ಗೌರವ ನಿಧಿಯೊಂದಿಗೆ ಸನ್ಮಾನ, ಸಂಘಟನೆ, ಹಾಗೂ ಯಕ್ಷಗಾನಕ್ಕೆ ದುಡಿಯುವ ಮಹನೀಯರುಗಳಿಗೆ ಗೌರವ ಮತ್ತು ಕೀರ್ತಿಶೇಷರಾದ ಐವರು ಹಿರಿಯ ಕಲಾವಿದರ ಸಂಸ್ಮರಣೆ ನಡೆಯಲಿದೆ ಎಂದು ವಿವರಿಸಿದರು.
ಬೆಳಗ್ಗೆ 8.30ರಿಂದ ರಾತ್ರಿ 10.30ರವರೆಗೆ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಮೂರು ಪೌರಾಣಿಕ ಯಕ್ಷಗಾನ ಬಯಲಾಟಗಳು ಪ್ರದರ್ಶನಗೊಳ್ಳಲಿವೆ. ಸಂಜೆ 5.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ, ಗೌರವಾರ್ಪಣೆ, ಸನ್ಮಾನ, ಸಂಸ್ಮರಣೆ ಹಾಗೂ ಬಯಲಾಟ ಕಾರ್ಯಕ್ರಮಗಳು ಜರುಗಲಿವೆ.
ಈ ಸಭಾಕಾರ್ಯಕ್ರಮದ ಅದ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ವಹಿಸಲಿದ್ದು,ಸಂಸದರಾದ ಕ್ಯಾ.ಬ್ರಿಜೇಶ್ ಚೌಟ,ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರರು, ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಭಾಗವಹಿಸುವರು ಎಂದರು.
ಸಂಯೋಜಕ ಜನಾರ್ದನ ಅಮ್ಮುಂಜೆ ಮಾತನಾಡಿ, ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ರಾಜಾ ಯಯಾತಿ, ಮಧ್ಯಾಹ್ನ 3ರಿಂದ ಸಂಜೆ 5.30ವರೆಗೆ ಇಂದ್ರಕೀಲಕ, ರಾತ್ರಿ 7ರಿಂದ 10.30ರವರೆಗೆ ರಾಮಾಂಜನೇಯ ಪ್ರಸಂಗ ಪ್ರದರ್ಶನಗೊಳ್ಳಲಿದ್ದು, ಪ್ರಸಿದ್ಧ ಕಲಾವಿದರು ಭಾಗವಹಿಸುವರು ಎಂದರು.
ಶ್ರೀಕ್ಷೇತ್ರ ಪೊಳಲಿಯಲ್ಲಿ ಆರಂಭವಾದ ಈ ಸಂಸ್ಥೆಯು ಕಳೆದ 30 ವರ್ಷಗಳಲ್ಲಿ 175 ಕ್ಕು ಮಿಕ್ಕಿ ಯಕ್ಷಗಾನ ಕಲಾವಿದರಿಗೆ ಸನ್ಮಾನ,ಕಲಾ ಪೋಷಕರಿಗೆ ಗೌರವಾರ್ಪಣೆ ಮಹಿಳಾ,ಮಕ್ಕಳ ಯಕ್ಷಗಾನಕ್ಕೆ ಪ್ರೋತ್ಸಾಹ,ಯಕ್ಷಗಾನ ಸಂಘಗಳಿಗೆ ಗೌರವ ನೀಡುತ್ತಾ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲೋಕೇಶ್ ಭರಣಿ, ಸುಬ್ರಾಯ ಕಾರಂತ ಪೊಳಲಿ, ಮೋಹನ್ ಬಿಲ್ವಪತ್ರೆ ಹಾಜರಿದ್ದರು.
