ಬಂಟ್ವಾಳ: ,ತಾಲೂಕಿನ ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್, ಶ್ರೀ ಶಾರದೋತ್ಸವ ಸೇವಾ ಸಮಿತಿ ಹಾಗೂ ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಅ.18, 19ರಂದು ಇರ್ವತ್ತೂರುಪದವು ಮೂಡುಪಡುಕೋಡಿ ಉನ್ನತೀಕರಿಸಿದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ “ದಶಾರದ ಸಂಭ್ರಮ-2026” ರ ಲಾಂಛನ ಬಿಡುಗಡೆ ಕಾರ್ಯಕ್ರಮ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಧಾರ್ಮಿಕ ಹಾಗೂ ಸಹಕಾರಿ ರಂಗದ ಹಿರಿಯ ಧುರೀಣರಾದ ಕೆ.ಲಕ್ಷ್ಮೀನಾರಾಯಣ ಉಡುಪ ಲಾಂಛನ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್. ಮಾತನಾಡಿ ದಶಮಾನೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕ್ರತಿಕ, ಸಾಮಾಜಿಕ, ಕ್ರೀಡೆ, ಸನ್ಮಾನ, ಪ್ರಶಸ್ತಿ ಪ್ರದಾನ, ಸ್ಮರಣ ಸಂಚಿಕೆ ಬಿಡುಗಡೆ, ಕಲಾ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ಅರ್ಥಪೂರ್ಣವಾಗಿ, ಮಾದರಿಯಾಗಿ ರೂಪುಗೊಳ್ಳಲಿದೆ. ಸರ್ವರ ಸಹಕಾರ ಅಗತ್ಯ ಎಂದರು.
ಗೌರವಾಧ್ಯಕ್ಷ ಟಿ.ಹರೀಂದ್ರ ಪೈ, ಸಂಚಾಲಕ ಮೋಹನ್ ಶೆಟ್ಟಿ ನರ್ವಲ್ದಡ್ಡ, ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು, ದಶಮಾನೋತ್ಸವ ಸಮಿತಿ ಸಂಚಾಲಕ ಸತೀಶ್ ಪೂಜಾರಿ ಬೆನಕ, ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಶೇಖರ ಪೂಜಾರಿ ಅಗಲ್ದೋಡಿ, ಸಾಂಸ್ಕ್ರತಿಕ ಸಮಿತಿ ಸಂಚಾಲಕ ಗೋಪಾಲ ಅಂಚನ್, ಟ್ರಸ್ಟ್ ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು, ಸಮಿತಿ ಪ್ರಮುಖರಾದ ಶಂಕರ ಶೆಟ್ಟಿ ಬೆದ್ರಮಾರು, ಸತೀಶ್ ಕರ್ಕೆರಾ ಕಯ್ಯಾಬೆ, ಹರೀಶ್ ಪೂಜಾರಿ ಎರ್ಮೆನಾಡು, ಪ್ರಶಾಂತ್ ದೇವಾಡಿಗ, ಸುಪ್ರೀತ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
