ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸವಿತಾ ಸೌಹಾರ್ದ ಸಹಕಾರಿಯ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಸಹಕಾರಿಯ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್ ಬಂಟ್ವಾಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಅಧ್ಯಕ್ಷರು ಮಾತನಾಡಿ, ಸಹಕಾರಿಯು ವರದಿ ಸಾಲಿನಲ್ಲಿ 73.32 ಕೋ.ರೂ.ವ್ಯವಹಾರ ನಡೆಸಿ 11.86 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ 13 ಶೇ. ಡಿವಿಡೆಂಡ್ ನೀಡಲಾಗುತ್ತದೆ. ಸಂಘದಲ್ಲಿ 30.15 ಲಕ್ಷ ರೂ. ಪಾಲು ಬಂಡವಾಳ, 15.58 ಕೋ.ರೂ.ರೇವಣಿ ಇರುತ್ತದೆ. ವರ್ಷಾಂತ್ಯಕ್ಕೆ 12.91 ಕೋ.ರೂ. ಸಾಲ ಹೊರ ಬಾಕಿ ಇರುತ್ತದೆ. ಸಂಘದಲ್ಲಿರುವ ಸೆಲೂನ್ ಸಾಮಾಗ್ರಿಗಳ ಮಾರಾಟ ವ್ಯವಸ್ಥೆಯನ್ನು ಎಲ್ಲರೂ ಬೆಂಬಲಿಸಬೇಕು. ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಯನ್ನು ಸಾಧಿಸಿದ್ದು, ಮುಂದೆಯೂ ನಿಮ್ಮ ಸಹಕಾರ ಅಗತ್ಯವಾಗಿದೆ ಎಂದರು.

ದ.ಕ.ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ, ಸಹಕಾರಿಯ ನಿರ್ದೇಶಕ ಆನಂದಭಂಡಾರಿ ಗುಂಡದಡೆ ಮಾತನಾಡಿ, ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಸವಿತಾ ಸಮಾಜ ಸಂಘಟನೆ ಆರಂಭಗೊಂಡು ಸಾಕಷ್ಟು ಮಂದಿಯ ಪರಿಶ್ರಮದಿಂದ ಉತ್ತಮವಾಗಿ ಬೆಳೆದುಬಂದಿದೆ. ಬಳಿಕ ಸವಿತಾ ಸೌಹಾರ್ದ ಸಹಕಾರಿ ಆರಂಭಗೊಂಡು ಎಲ್ಲಾ ಸಮಾಜದವರ ಸಹಕಾರದಿಂದ ಸಂಸ್ಥೆಯು ಎಲ್ಲರಿಗೂ ಆರ್ಥಿಕ ಶಕ್ತಿಯನ್ನು ಕೊಟ್ಟು ನಿರಂತರವಾಗಿ ಲಾಭವನ್ನು ಗಳಿಸುತ್ತಾ ಬಂದಿದೆ ಎಂದರು.
ನಿರ್ದೇಶಕರಾದ ಮೋಹನ್ ಭಂಡಾರಿ ಪೊಯಿತಾಜೆ, ಪದ್ಮನಾಭ ಭಂಡಾರಿ ಸುಳ್ಯ, ರವಿ ಎಸ್.ಮಡಂತ್ಯಾರು, ಭುಜಂಗ ಸಾಲ್ಯಾನ್, ಆಶಾ ಕಂದಾವರ, ಸುಮಾಲತಾ ಪುತ್ತೂರು ವೇದಿಕೆಯಲ್ಲಿದ್ದರು.
ಉಪಾಧ್ಯಕ್ಷ ಸುರೇಶ್ ನಂದೊಟ್ಟು ಸ್ವಾಗತಿಸಿದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶನ್ ಎಸ್. ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ವಸಂತ ಬೆಳ್ಳೂರು ವಂದಿಸಿದರು.
