ಬಂಟ್ವಾಳ: ತಾಲೂಕಿನ ಕೊಳತ್ತಮಜಲು ಅಬ್ದುಲ್ ರಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೋಕಾ ಕಾಯ್ದೆಯನ್ನು ಎದುರಿಸುತ್ತಿದ್ದ ಆರೋಪಿಗಳಾದ ಭರತ್ ಕುಮ್ಡೇಲು ಸಹಿತ ಎಂಟು ಮಂದಿಗೆ ಮೈಸೂರಿನ ವಿಶೇಷ ನ್ಯಾಯಾಲಯ ಜಾಮೀನು ಮಂಜೂರಾದ ಬೆನ್ನಲ್ಲೇ ಕರ್ನಾಟಕ ಸರಕಾರ ತುಷ್ಠೀಕರಣದ ಭಾಗವಾಗಿ ಆರು ಮಂದಿಯ ವಿರುದ್ಧ ಗೂಂಡಾಕಾಯ್ದೆ ಜಾರಿಗೊಳಿಸಿ ಅವರನ್ನು ಮತ್ರೆ ಜೈಲಿನಲ್ಲಿ ಉಳಿಯುವಂತೆ ಮಾಡಿರುವ ದುರುದ್ದೇಶಪೂರಿತ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ವಿ.ಹಿಂ.ಪ.,ಬಜರಂಗದಳ ಬಂಟ್ವಾಳ ಪ್ರಖಂಡ ಸೆ.28 ರಂದು ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದೆ.


ಸೋಮವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಿ.ಹಿಂ.ಪ.ಬಂಟ್ವಾಳ ಪ್ರಖಂಡದ ಅಧ್ಯಕ್ಷರು,ನ್ಯಾಯವಾದಿ  ಪ್ರಸಾದ್ ಕುಮಾರ್ ರೈ ಅವರು ನ್ಯಾಯಾಲಯದ ಆದೇಶವನ್ನು ಪಾಲಿಸಿ ಜಾಮೀನು ಪಡೆದುಕೊಂಡಿರುವ ಆರೋಪಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸುವ ಬದಲು ಸರಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿ, ದುರುದ್ದೇಶಪೂರಕವಾಗಿ ಭರತ್ ಕುಮ್ಡೇಲು ಸಹಿತ ಆರು ಮಂದಿಯ ವಿರುದ್ದ ದಿಡೀರ್ ಗೂಂಡಾಕಾಯ್ದೆ ಜಾರಿಗೊಳಿಸಿ ಜೈಲಿನಿಂದ ಬಿಡುಗಡೆಯಾಗದಂತೆ ತಡೆಹಿಡಿದಿರುವುದು ಖಂಡನೀಯವಾಗಿದೆ ಎಂದರು.


ಮೈಸೂರು ವಿಶೇಷ ನ್ಯಾಯಾಲಯದಲ್ಲಿ  6 ರಿಂದ 13 ವರೆಗಿನ ಆರೋಪಿಗಳ ಜಾಮೀನು ಅರ್ಜಿಗೆ ಸಂಬಂಧಿಸಿ ವಿಸ್ತೃತವಾಗಿ ವಾದ,ಪ್ರತಿವಾದ ನಡೆದು ನ್ಯಾಯಾಧೀಶರು ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಸೆ.15 ರಂದು ಭರತ್ ಕುಮ್ಡೇಲು, ಪ್ರದೀಪ್, ರಂಜಿತ್, ಶಿವಪ್ರಸಾದ್, ಅಭಿನ್ ರೈ, ಸಾಹಿತ್, ಸಚಿನ್ ಹಾಗೂ ತೇಜಾಕ್ಷ ಎಂಬವರಿಗೆ ತೆರೆದ ನ್ಯಾಯಾಲಯದಲ್ಲಿ  ಜಾಮೀನು ಮಂಜೂರುಗೊಳಿಸಿತ್ತು‌. ಇದಾದ ಕೆಲವೇ ಹೊತ್ತಿನಲ್ಲಿ ಬಳ್ಳಾರಿ ಮತ್ತು ಕಲ್ಬುರ್ಗಿ ಕಾರಗೃಹದಲ್ಲಿದ್ದ ಭರತ್ ಕುಮ್ಡೇಲು,ಶಿವಪ್ರಸಾದ್ , ಪ್ರದೀಪ್ , ಅಭಿನವ್ ರೈ,ತೇಜಾಕ್ಷ  ಹಾಗೂ ರಂಜಿತ್ ವಿರುದ್ಧ  ಗೂಂಡಾಕಾಯ್ದೆ ದಾಖಲಿಸಲಾಗಿದೆ.ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.


ಈ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ಜೈಲಿನಲ್ಲೇ ಇರಿಸುವಂತ ಹುನ್ನಾರ ಮೇಲ್ನೋಟಕ್ಕೆ ಕಂಡುಬಂದಿದ್ದು,ತಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂ ಕಾರ್ಯಕರ್ತರ ಮೇಲಿನ ದಮನಕಾರಿ ಪ್ರವತ್ತಿಯನ್ನು ನಿಲ್ಲಿಸಬೇಕು ಮತ್ತು ನ್ಯಾಯಾಲಯದಿಂದ ಜಾಮೀನು ದೊರೆತ ಬಳಿಕ ಆರು ಂಮದಿಯ ವಿರುದ್ಧ ಜಾರಿಗೊಳಿಸಾದ ಗೂಂಡಾಕಾಯ್ದೆಯನ್ನು ಹಿಮಕಪಡೆಯಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.ಸಂಘಟನೆಯ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಸಾದ್ ರೈ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ ಲೋಹಿತ್ ಪಣೋಲಿಬೈಲ್, ಸಹಸಂಯೋಜಕ ಸಂತೋಷ್ ಸರಪಾಡಿ ಹಾಗೂ ಕಾರ್ಯದರ್ಶಿ ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *