ಬಂಟ್ವಾಳ: ಕರಾವಳಿ ಭಾಗದ ಜನರ ಬಹುಕಾಲದ ಕನಸಾಗಿರುವ ಹಾಗೂ ಕರಾವಳಿಯ ಅಸ್ಮಿತೆಯಾಗಿರುವ ತುಳು ಭಾಷೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರ ನೇತೃತ್ವದ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿತು.

ತುಳು ಭಾಷೆಯು ತನ್ನದೇ ಆದ ಸುದೀರ್ಘ ಇತಿಹಾಸ ಹಾಗೂ ಶ್ರೀಮಂತ ಸಾಹಿತ್ಯ ಸಂಸ್ಕೃತಿಯನ್ನು ಹೊಂದಿದೆ ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಭೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ವಿಷಯವನ್ನು ಮಂಡಿಸಬೇಕು ಮತ್ತು ಆದ್ಯತೆಯ ನೆಲೆಯಲ್ಲಿ ಗಂಭೀರವಾಗಿ ಚರ್ಚಿಸಬೇಕು, ಕರಾವಳಿಯ ಜನರ ಭಾವನೆಗಳಿಗೆ ಸ್ಪಂದಿಸಿ ತುಳು ಭಾಷೆಗೆ ಸೂಕ್ತ ಗೌರವ ಸಿಗುವಂತೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕು ಎಂದು ನಿಯೋಗವು ಸಚಿವರಲ್ಲಿ ವಿನಂತಿಸಿತು.
ಕರಾವಳಿ ಜಿಲ್ಲೆಗಳ ಲಕ್ಷಾಂತರ ಜನರ ಮಾತೃಭಾಷೆಯಾದ ತುಳು ಭಾಷೆಗೆ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸ್ಥಾನ ಸಿಗಬೇಕಾದರೆ ಮೊದಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಅಧಿಕೃತ ಮಾನ್ಯತೆ ಸಿಗಬೇಕಾಗಿದೆ, ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ದಶಕಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಆಗ್ರಹಿಸಲಾಯಿತು.
ನಿಯೋಗದಲ್ಲಿ ಪ್ರಮುಖರಾದ ಮೋಹನ್ ಶೆಟ್ಟಿ ಪಂಜಿಕಲ್ಲು, ಮಧುಸೂದನ ಶೆಣೈ ಕಳ್ಳಿಗೆ, ನವೀನ್ ಡಿಸೋಜ ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು,
