ಗುರುಪುರ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಮತ್ತು ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಗುರುನಗರ ಗುರುಪುರ ಇಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜನ್ಮ ದಿನಾಚರಣೆ ಪ್ರಯುಕ್ತ ಆ. ೩೦ರಂದು ಗುರುಪೂಜೆಯ ಬಳಿಕ ಸಭಾ ಕಾರ್ಯಕ್ರಮ, ವಿದ್ಯಾರ್ಥಿವೇತನ ವಿತರಣೆ ಹಾಗೂ ಲಕ್ಕಿಡಿಪ್ ಡ್ರಾ ನಡೆಯಿತು.

ಸಭೆಯ ಉದ್ಘಾಟನೆ ಬಳಿಕ ಸಂಘದ ಗೌರವಾಧ್ಯಕ್ಷ ದೀಪಕ್ ಕೋಟ್ಯಾನ್ ಅವರು ಮಾತನಾಡಿ, ಸಂಘದೊಳಗೆ ರಾಜಕೀಯ ಇರಕೂಡದು. ಸಂಘದ ಬೆಳವಣಿಗೆಯಲ್ಲಿ ರಾಜಕೀಯ ಶಕ್ತಿ ಅವಶ್ಯ. ವಿದ್ಯಾರ್ಥಿಗಳು ತಮ್ಮದೇ ಶಕ್ತಿ ಮೂಲಕ ಸಾಧನೆಗೈಯುವ ಕಾಲ ಇದಾಗಿದ್ದು, ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು ಎಂದರು.

ಶ್ರೀ ಗೆಜ್ಜೆಗಿರಿ ಕ್ಷೇತ್ರದ ಕೋಶಾಧಿಕಾರಿ, ಉದ್ಯಮಿ ಮೋಹನದಾಸ್ ಬಂಗೇರ ವಾಮಂಜೂರು ಮಾತನಾಡಿ, ನಮ್ಮ ಸಮಾಜದಲ್ಲಿ ಗಂಡು ಮಕ್ಕಳು ಇನ್ನೂ ಶಿಕ್ಷಣಕ್ಕೆ ಮಹತ್ವ ನೀಡಿದಂತಿಲ್ಲ. ಅಂದರೆ, ಉನ್ನತ ವ್ಯಾಸಂಗ ಗಳಿಸುವಲ್ಲಿ ಸರಿಯಾದ ಹೆಜ್ಜೆ ಇಟ್ಟಿಲ್ಲ. ಪರಿಣಾಮ ಉನ್ನತ ಸ್ಥಾನಗಳಲ್ಲಿ ಬಿಲ್ಲವರು ಬೆರಳೆಣಿಕೆಯಲ್ಲಿದ್ದಾರೆ. ಇನ್ನಾದರೂ ಈ ಕೊರತೆ ನೀಗಿಸುವಲ್ಲಿ ಬಿಲ್ಲವ ಸಂಘಗಳು ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಪ್ರಸ್ತಾವಿಕ ಮಾತನ್ನಾಡಿದರು. ನಿಕಟಪೂರ್ವ ಕಾರ್ಯದರ್ಶಿ ಯೋಗೀಶ್ ಪೂಜಾರಿ ಅವರು ವಿದ್ಯಾರ್ಥಿವೇತನ ಗಳಿಸಿದ ವಿದ್ಯಾರ್ಥಿಗಳ ಪಟ್ಟಿ ಓದಿ, ಲಕ್ಕಿಡಿಪ್ ಡ್ರಾ ಮಾಡಿದರು.
ಶೋಭಾ ಡಿ. ನಡುಗುಡ್ಡೆ ಹಾಗೂ ನಿಕಟಪೂರ್ವ ಅಧ್ಯಕ್ಷ ಮಹಾಬಲ ಅಮೀನ್ ಸಹಕರಿಸಿದರು. ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಜ್ಯೋತಿ ಎನ್. ಪೂಜಾರಿ, ಉದ್ಯಮಿ ನಿತೇಶ್ ಕುಮಾರ್ ಕಾಜಿಲ, ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಧೂಮಾವತಿ ದರ್ಶನ ಪಾತ್ರಿ ತನಿಯಪ್ಪ ಪೂಜಾರಿ, ಸೀತಾರಾಮ ಪೂಜಾರಿ ಕರಿಮನೆ, ವನಿತಾ ನಡುಗುಡ್ಡೆ ಉಪಸ್ಥಿತರಿದ್ದರು. ಯಶವಂತ ಕೋಟ್ಯಾನ್ ನಿರೂಪಿಸಿದರೆ, ಜೊತೆ ಕಾರ್ಯದರ್ಶಿ ಯೋಗಿತಾ ವಂದಿಸಿದರು.
