ಬಂಟ್ವಾಳ: ತಾಲೂಕಿನ  ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡದಲ್ಲಿ ಹಾಡಹಗಲೇ ಬೈಕ್ ಸವಾರರೋರ್ವರನ್ನು ಅಡ್ಡಗಟ್ಟಿದ ಎರಡು ಬೈಕ್ ನಲ್ಲಿ ಬಂದ ನಾಲ್ವರು ಅಪರಿಚಿತರು, ತಲವಾರು ತೋರಿಸಿ 8,35 ಲ.ರೂ. ನಗದು ಹಣವನ್ನು ಸುಲಿಗೆಗೈದು ಪರಾರಿಯಾದ ಘಟನೆ ಗುರುವಾರ ನಡೆದಿದ್ದು,ಸ್ಥಳೀಯವಾಗಿ ಅತಂಕವನ್ನುಂಟು ಮಾಡಿದೆ.


ಮಂಗಳೂರಿನ ಕಣ್ಣೂರು ಎಂಬಲ್ಲಿ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟದ ಹೋಲ್ ಸೇಲ್ ಸಂಸ್ಥೆಯೊಂದರ ಉದ್ಯೋಗಿ,ಸುರತ್ಕಲ್ ನ ಚೊಕ್ಕಬೆಟ್ಟು ನಿವಾಸಿ,ಕಳೆದ 27 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಯ್ಯದಿ (61) ಎಂಬವರು, ವಿವಿಧ ಅಂಗಡಿಗಳಿಗೆ ಹಾಕಿದ್ದ ಸಿಮೆಂಟ್ ,ಕಬ್ಬಿಣದ ನಗದು ಹಣವನ್ನು ಸಂಗ್ರಹಿಸಿ, ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಕಕ್ಕೆಪದವಿನಿಂದ ಬಂಟ್ವಾಳದತ್ತ ಬೈಕ್ ನಲ್ಲಿ ತೆರಳುತ್ತಿದ್ದಾಗ ಇವರನ್ನು ಎರಡು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರುಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಜಂಕ್ಷನ್ ದಾಟಿ ನಿರ್ಜನ ಪ್ರದೇಶದ ತಿರುವಿನಲ್ಲಿ ತಡೆದು ನಿಲ್ಲಿಸಿ ಈ ಕೃತ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಈ ಸಂದರ್ಭ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಮಯ್ಯದಿ ಅವರನ್ನು ಏಕಾಏಕಿ  ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಕೆ ಒಡ್ಡಿ ಅವರಲ್ಲಿದ್ದ ಬ್ಯಾಗ್ ನಿಂದ 8.35 ಲ.ರೂ.ವನ್ನು ಸುಲಿಗೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.


ಬಂಟ್ವಾಳ, ವಾಮದಪದವು, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಕಕ್ಕೆಪದವು ಮೊದಲಾದೆಡೆಯ ಅಂಗಡಿಗಳಿಗೆ  ಸಂಸ್ಥೆಯಿಂದ ಹೋಲ್ ಸೇಲ್ ಆಗಿ ಕಳಿಸಿಕೊಡಲಾಗುವ ಸಿಮೆಂಟ್ ,ಕಬ್ಬಿಣದ ಹಣವನ್ನು ಪ್ರತೀ ಗುರುವಾರದಂದು ಎಲ್ಲಾ ಅಂಗಡಿಗಳಿಗೆ ಹೋಗಿ ಹಣವನ್ನು ಸಂಗ್ರಹಿಸುವ ಕೆಲಸವನ್ನು  ಮಯ್ಯದಿ ಮಾಡುತಿದ್ದು, ಹಾಗೇ ಈ ಗುರುವಾರವು ವಾಮದಪದವು, ಗುರುವಾಯನಕೆರೆ, ಬೆಳ್ತಂಗಡಿ,  ಉಜಿರೆ, ಸೋಮಂತಡ್ಕ, ಕಕ್ಕೆಪದವು ಕಡೆಗಳಲ್ಲಿ ನಗದು ಹಣವನ್ನು ಸಂಗ್ರಹಿಸಿ  ವಾಪಾಸ್ಸು ಕಟ್ಟದಪಡ್ಪ ,ಅಲಿಪಾದೆಯಾಗಿ ಬಂಟ್ವಾಳ ಕಡೆಗೆ  ಬರುತಿದ್ದರು.


ಆರೋಪಿಗಳು ಮಯ್ಯದಿ ಅವರಿಗೆ ತಲವಾರು ತೋರಿಸಿ ಬ್ಯಾರಿ ಭಾಷೆಯಲ್ಲೆ ಬೆದರಿಕೆ ಒಡ್ಡಿ‌ಹಣ ಸುಲಿಗೆಗೈದಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

By Suddi9

Leave a Reply

Your email address will not be published. Required fields are marked *