ಬಂಟ್ವಾಳ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅವಮಾನವನ್ನು ತಡೆಯಬೇಕು ಹಾಗೂ ಪ್ಲಾಸ್ಟಿಕ್ ಧ್ವಜ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ‘ರಾಷ್ಟ್ರಧ್ವಜವನ್ನು ಗೌರವಿಸಿ ಅಭಿಯಾನದ ಭಾಗವಾಗಿ ಬಂಟ್ವಾಳ ತಹಶೀಲ್ದಾರ್ ,ಪೊಲೀಸ್ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ.

ಧ್ವಜ ಸಂಹಿತೆಯನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವ ಅಂಗಡಿಕಾರರು, ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು, ವಿದ್ಯಾರ್ಥಿಗಳು ಪ್ಲಾಸ್ಟಿಕ್,      ಕಾಗದದ ಧ್ವಜಗಳನ್ನು ಮತ್ತು ‘ತ್ರಿವರ್ಣ ಮಾಸ್ಕ್’ಗಳನ್ನು ಖರೀದಿಸದಂತೆ ಜಾಗೃತಿ ಮೂಡಿಸಲು  ಶಾಲಾ-ಕಾಲೇಜುಗಳಲ್ಲಿ ಸಮಿತಿಯ ವತಿಯಿಂದ ‘ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ವಿಷಯದ ಕುರಿತು ಉಪನ್ಯಾಸ, ಪ್ರಶ್ನೋತ್ತರ ಸ್ಪರ್ಧೆ, ಕರಪತ್ರ ವಿತರಣೆ ಮತ್ತು ಬಿದ್ದಿರುವ ಧ್ವಜಗಳನ್ನು ಸಂಗ್ರಹಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹೈಕೋರ್ಟ್ ಆದೇಶದಂತೆ ಜಿಲ್ಲೆಯಲ್ಲಿ ‘ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿ’ಯನ್ನು ರಚಿಸಬೇಕು, ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಶಾಲಾ-ಕಾಲೇಜುಗಳಲ್ಲಿ ಧ್ವಜ ಗೌರವ ಅಭಿಯಾನಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ರಾಷ್ಟ್ರಧ್ವಜವು ಪ್ರತಿಯೊಬ್ಬ ಭಾರತೀಯನ ಹೆಮ್ಮೆ, ಆತ್ಮ ಸಮ್ಮಾನ ಮತ್ತು ರಾಷ್ಟ್ರೀಯತೆಯ ಗುರುತಾಗಿದ್ದು, ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆ ಮತ್ತು ಜನವರಿ ೨೬ರ ಗಣರಾಜ್ಯೋತ್ಸವದಂದು ದೇಶಾದ್ಯಂತ ಅತ್ಯಂತ ಅಭಿಮಾನದಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ ಸಂಜೆ ಅಥವಾ ಮರುದಿನ ರಸ್ತೆ, ಚರಂಡಿ ಹಾಗೂ ಕಸದ ತೊಟ್ಟಿಗಳಲ್ಲಿ ಕಾಗದ ಮತ್ತು ಪ್ಲಾಸ್ಟಿಕ್‌ನ ಸಣ್ಣ,ಸಣ್ಣ ಧ್ವಜಗಳು ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಈ ಧ್ವಜಗಳು ಜನರ ಕಾಲಿನಕೆಳಗೆ ತುಳಿಯಲ್ಪಟ್ಟು ರಾಷ್ಟ್ರಧ್ವಜಕ್ಕೆ ಘೋರ ಅನಾದರವಾಗುತ್ತಿದೆ, ಧ್ವಜದ ಗೌರವಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ದೇಶಭಕ್ತರು ಮತ್ತು ಕ್ರಾಂತಿಕಾರಿಗಳ ತ್ಯಾಗಕ್ಕೆ ಎಸಗುವ ಅಪಚಾರವಾಗಿದೆ. ಇದಲ್ಲದೆ, ‘ತ್ರಿವರ್ಣ ಮಾಸ್ಕ್’ಗಳನ್ನು ಧರಿಸುವುದು ಅಥವಾ ಮಾರಾಟ ಮಾಡುವುದು ಧ್ವಜ ಸಂಹಿತೆಯ ಪ್ರಕಾರ ಅಪರಾಧವಾಗಿದೆ ಎಂದು‌ ಮನವಿಯಲ್ಲಿ ತಿಳಿಸಲಾಗಿದೆ.

By Suddi9

Leave a Reply

Your email address will not be published. Required fields are marked *