ಮುಂಬಯಿ: ಕಣ್ಮರೆಯಾಗುತ್ತಿರುವ ತುಳುನಾಡಿದ ಆಹಾರ ಸಂಸ್ಕೃತಿ ಕುರಿತು ವಿಚಾರಸಂಕಿರಣ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಹಯೋಗದಲ್ಲಿ ಭಾನುವಾರ ನಡೆಯಿತು


ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಶಿವರಾಮ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿ, ಮನುಷ್ಯನ ಆಹಾರ ಸಂಸ್ಕೃತಿ ನಿಸರ್ಗದಲ್ಲಿ ಆಗುವ ಬದಲಾವಣೆಗಳೊಂದಿಗೆ ಬೆಸೆದುಕೊಂಡಿದೆ. ತುಳುನಾಡಿನ ಆಹಾರ ಪದ್ಧತಿಗಳು ಆಯಾ ಕಾಲಕ್ಕೆ ಏನೇನು ಬೇಕು ಎಂಬುದನ್ನು ವಿವರಿಸುತ್ತದೆ ಎಂದರು.

ಆಟಿ ಅಮಾವಾಸ್ಯೆಗೆ ಮಾಡುವ ಹಾಲೆ ಮರದ ತೊಗಟೆಯ ರಸದ ಕಷಾಯದ ವಿಧಿ ನಿಷೇಧ ಕುರಿತು ವಿವರಿಸಿದ ಅವರು, ಮರದ ತೊಗಟೆ ಮದ್ದಾಗಿ ಪರಿವರ್ತನೆ ಆಗಬೇಕಿದ್ದರೆ ನಿಸರ್ಗದ ಪಾತ್ರವಿದೆ. ಇದೇ ರೀತಿ ಕೌಟುಂಬಿಕ ಜೀವನಕ್ಕೂ ಆಹಾರ ಪದ್ಧತಿಗೂ ಸ೦ಬ೦ಧವಿದೆ ಎ೦ದರು. ಕುಟುಂಬ ಸಂರಕ್ಷಣೆ, ಬಂಧುತ್ವ, ಸಮಾಜದ ಒಳಗೆ ಇರುವ ಜಾತಿಯ ವಿನ್ಯಾಸಗಳು ಆಹಾರ ಸಂಸ್ಕೃತಿಯ ಕುರಿತು ವಿವರಿಸಿದ ಅವರು ಇಡೀ ವಿಚಾರಸಂಕಿರಣ ಉತ್ತಮ ಮಂಥನಕ್ಕೆ ವೇದಿಕೆ ಒದಗಿಸಿದೆ ಎಂದರು.

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಮೇನಕಾ ರೋಡ್ರಿಗಸ್ ಉದ್ಘಾಟಿಸಿ ಮಾತನಾಡಿ, ಆಹಾರ ಸಂಸ್ಕೃತಿಯ ವೈವಿಧ್ಯವನ್ನು ಅರಿಯಲು ವಿಚಾರಸಂಕಿರಣ ಪೂರಕ ಪಾತ್ರ ವಹಿಸುತ್ತದೆ ಎಂದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ| ತುಕಾರಾಮ ಪೂಜಾರಿ ಮಾತನಾಡಿ, ಹಿಂದಿನ ಕಾಲದ ತುಳು ಬದುಕು, ಜನಜೀವನದ ಕುರಿತು ವಿವರಿಸಿ, ಪ್ರಸ್ತುತ ಸನ್ನಿವೇಶದಲ್ಲಿ ಪುನರಾವಲೋಕನ ನಡೆಸುವ ಅಗತ್ಯವನ್ನು ತಿಳಿಸಿದರು. ಈ ಸಂದರ್ಭ ಕೇಂದ್ರದ ಡಾ. ಆಶಾಲತಾ ಸುವರ್ಣ, ಕಾರ್ಯಕ್ರಮ ಸಂಯೋಜಕ ಅರವಿಂದ ಕುಡ್ಲ ಉಪಸ್ಥಿತರಿದ್ದರು.

ಮೊದಲ ಅಧಿವೇಶನದಲ್ಲಿ ತುಳುವ ಸಮಾಜ ಮತ್ತು ಆಹಾರ ಸಂಸ್ಕೃತಿ ಕುರಿತು ಸಂಶೋಧಕಿ ರಾಜಶ್ರೀ ಟಿ. ರೈ ಪೆರ್ಲ ಮತ್ತು ಪಾರಂಪರಿಕ ಆಹಾರ ತಜ್ಞ ಸುದರ್ಶನ ಭಟ್ ಬೆದ್ರಡಿ ಮಾತನಾಡಿದರು. ಎರಡನೇ ಅಧಿವೇಶನದಲ್ಲಿ ತುಳುವ ಸಂಸ್ಕೃತಿಯಲ್ಲಿ ಪಾತ್ರೆಗಳ ಮಹತ್ವ ಕುರಿತು ಪ್ರಾಚೀನ ವಸ್ತುಗಳ ಸಂಗ್ರಾಹಕ ಹಾಗೂ ದೃಶ್ಯ ಕಲಾವಿದ ಪುರುಷೋತ್ತಮ ಅಡ್ಡೆ, ಮೂರನೇ ಅಧಿವೇಶನದಲ್ಲಿ ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಆಹಾರ ಮತ್ತು ಆರೋಗ್ಯದ ಕುರಿತು ವೈದ್ಯ ಡಾ. ಸುಪ್ರೀತ್ ಜೆ. ಲೋಬೊ ಮಾತನಾಡಿದರು.

ಕಾರ್ಯಕ್ರಮ ಸಂಯೋಜಕ ಅರವಿಂದ ಕುಡ್ಲ ನಿರೂಪಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಿಂಧೂರ ಟಿ.ಪಿ. ವಂದಿಸಿದರು.

By Suddi9

Leave a Reply

Your email address will not be published. Required fields are marked *