ಬಂಟ್ವಾಳ: ನಿರಂತರವಾಗಿ ಸುರಿದ ಗಾಳೀ,ಮಳೆಗೆ ತಾಲೂಕಿನ ಉಳಿಗ್ರಾಮದ ಬೋಳದಡ್ಕ ನಿವಾಸಿ ಪ್ರಸಾದ್ ಗೌಡ ಅವರ ಮನೆ ಕುಸಿದು ಹಾನಿಗೊಳಗಾದ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆ ಕುಸಿತದಿಂದಾಗಿ ಉಂಟಾದ ಹಾನಿಯನ್ನು ವೀಕ್ಷಿಸಿದ ಶಾಸಕರು, ಪ್ರಸಾದ್ ಗೌಡ ಹಾಗೂ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದು ಕುಟುಂಬಕ್ಕೆ ಅಗತ್ಯ ನೆರವು ಹಾಗೂ ಸರ್ಕಾರದಿಂದ ಸಿಗಬೇಕಾದ ಪರಿಹಾರ ಶೀಘ್ರವಾಗಿ ದೊರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮನೆಗಳ ಕುರಿತು ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಸ್ತಳೀಯ ಮುಖಂಡರಾದ ಚಿದಾನಂದ ರೈ, ಸುರೇಶ ಮೈರ, ವಸಂತ ಉಳಿ, ರೋಹಿನಾಥ, ಗುರುಪ್ರಸಾದ್ ನಾಯಕ್, ಗ್ರಾಮ ಆಡಳಿತಾಧಿಕಾರಿ ಚೆನ್ನಬಸಪ್ಪ, ಪಂಚಾಯತ್ ಕಾರ್ಯದರ್ಶಿ ಯಶೋಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
