ಬಂಟ್ವಾಳ : ತಾಲೂಕಿನ ಬರಿಮಾರು ಸಮೀಪದ ಕಲೆಟ್ಟಿ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಶಾಲಾ ಬಸ್ ವೊಂದರ ಮೇಲೆ ಮರ ಬಿದ್ದು ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಬಾಲಕಿಯ ಪೆರ್ನೆ ಅಮೈ ನಿವಾಸಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದುರಂತದಲ್ಲಿ ಜೀವ ಕಳೆದುಕೊಂಡ ಪುಟ್ಟ ಬಾಲಕಿಯ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ ಅವರು, ಮೃತಳ ಹೆತ್ತವರು ಹಾಗೂ ಕುಟುಂಬಸ್ಥರನ್ನು ಭೇಟಿಯಾಗಿ ದುಃಖದಲ್ಲಿ ಭಾಗಿಯಾದರು. ಈ ದುಃಖದ ಸಂದರ್ಭದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಇರುವಂತೆ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಈ ಘಟನೆಯಿಂದ ಗಾಯಗೊಂಡಿರುವ ವಿದ್ಯಾರ್ಥಿಗಳು ಶೀಘ್ರ ಗುಣಮುಖರಾಗಲೆಂದು ಹಾರೈಸಿದ ರಮಾನಾಥ ರೈ ಅವರು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬೂಡ ಅಧ್ಯಕ್ಷ ಬೇಬಿ ಕುಂದರ್,ಮಾಣಿ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಪ್ರಮುಖರಾದ ನಾರಾಯಣ ನಾಯ್ಕ್, ಚಂದ್ರಶೇಖರ್ ಭಂಡಾರಿ, ಬಿ ಆರ್ ಅಂಚನ್, ಫಾರೂಕ್ ಪೆರ್ನೆ, ಗೀತೇಶ್ ಪೆರ್ನೆ ಮೊದಲಾದವರು ಉಪಸ್ಥಿತರಿದ್ದರು.
