ಬಂಟ್ವಾಳ:ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆಯ ಪ್ರಗತಿ ಕುರಿತು ಮಹತ್ವದ ಸಭೆಯು ಬಿ.ಸಿ.ರೋಡ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸಭೆಯಲಗಲಿ ಭಾಗವಹಿಸಿ ಮಾತನಾಡಿ,
ಮತದಾರರ ಪಟ್ಟಿಯು ಶೇ.100ರಷ್ಟು ನಿಖರ ಹಾಗೂ ಸಮಗ್ರವಾಗುವ ನಿಟ್ಟಿನಲ್ಲಿ ಕಾರ್ಯಕರ್ತರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗಿ ಪರಿಗಣಿಸದೆ, ಪ್ರತಿಯೊಬ್ಬ ಅರ್ಹ ಮತದಾರರ ಬಳಿಗೆ ತಲುಪುವ ಜನಜಾಗೃತಿ ಅಭಿಯಾನವಾಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದರು.
ಕ್ಷೇತ್ರದಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಕಾರ್ಯವನ್ನು ಇನ್ನಷ್ಟು ವೇಗಗೊಳಿಸಲು ಮಂಡಲ, ಶಕ್ತಿಕೇಂದ್ರ ಹಾಗೂ ಬೂತ್ ಮಟ್ಟದಲ್ಲಿ ಸಮನ್ವಯ ಸಾಧಿಸಿ, ಬಾಕಿ ಇರುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಈಗಾಗಲೇ ಸ್ವೀಕೃತಗೊಂಡಿರುವ ಅರ್ಜಿಗಳನ್ನು ತ್ವರಿತವಾಗಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡುವ ಮೂಲಕ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈತಪ್ಪದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಪ್ರಗತಿ, ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಸ್ಥಿತಿಗತಿ, ಬಾಕಿ ಉಳಿದಿರುವ ಅರ್ಜಿಗಳ ಮಾಹಿತಿ ಹಾಗೂ ಆನ್‌ಲೈನ್ ಅಪ್‌ಲೋಡ್ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸುವ ಕುರಿತು ಚರ್ಚಿಸಲಾಯಿತು.
ವಿವಿಧ ಗ್ರಾಮಗಳ ಎಸ್‌ಐಆರ್ ಕಾರ್ಯದ ಪ್ರಗತಿಯ ಕುರಿತು ಪ್ರತ್ಯೇಕವಾಗಿ ಪರಿಶೀಲನೆ ನಡೆಸಲಾಯಿತಲ್ಲದೆ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು, ಬಂಟ್ವಾಳದ ಪ್ರಭಾರಿ ರಾಕೇಶ್ ರೈ ಕಡೆಂಜಿ, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ್ ,ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ, ಪ್ರಮುಖರಾದ ಬಿ. ದೇವದಾಸ್ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ರಾಮದಾಸ್ ಬಂಟ್ವಾಳ, ಮಾಧವ ಮಾವೆ, ಸುಲೋಚನಾ ಜಿ.ಕೆ. ಭಟ್,ಪ್ರಭಾಕರ ಪ್ರಭು,ಪುರುಷೋತ್ತಮ ಶೆಟ್ಟಿ ಸಹಿತ ಪಕ್ಷದ ಪದಾಧಿಕಾರಿಗಳು, ಶಕ್ತಿಕೇಂದ್ರ, ಬೂತ್ ಮಟ್ಟದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
