ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ೨೦೨೬-೨೭ ನೇ ಸಾಲಿನ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು , ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಹಿತ ಕಣ್ಣ ಮುಂದಿರಿಸಿ ಕೊಂಡು ಈ ಸಂಸ್ಥೆ ಆರಂಭವಾಗಿದೆ. ನಮ್ಮ ದೇಶದ ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳ ಶಿಕ್ಷಣ ಇಂದಿನ ಪೀಳಿಗೆಗೆ ಕೊಡಬೇಕು, ಇತಿಹಾಸ, ಮಹಾಪುರುಷರ ಬಗ್ಗೆ ತಿಳಿಯಬೇಕು ಎಂಬ ಉದ್ದೇಶದಿಂದ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ನೀಡುತ್ತಿದ್ದೇವೆ ಎಂದರು.

ಶಿಕ್ಷಣ ವ್ಯಾಪಾರೀಕರಣ ಆಗಬಾರದೆಂಬ ಉದ್ದೇಶದಿಂದ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಹೆತ್ತವರ ಬಗ್ಗೆ ಗೌರವ, ಒಳ್ಳೆಯ ಚಿಂತನೆ, ಸಂಸ್ಕಾರ ಬೆಳೆಯಬೇಕೆಂಬ ಹಿನ್ನಲೆಯಲ್ಲಿ ಮಕ್ಕಳ ಹಿತ ದೃಷ್ಠಿಯಿಂದ ಇವತ್ತಿನ ಅವಶ್ಯಕತೆಗಳಿಗೆ ಅನುಗುಣವಾಗಿ ಕಂಪ್ಯೂಟರ್ ಶಿಕ್ಷಣ, ವಿಜ್ಞಾನಕ್ಕೆ ಸಂಬಂಧಪಟ್ಟ ವ್ಯವಸ್ಥೆಯನ್ನು ಜೋಡಿಸಲಾಗಿದೆ” ಎಂದರು.
ಅತಿಥಿಗಳು ದೀಪ ಪ್ರಜ್ವಲನೆಗೈದು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಭವಿಷ್ಯದ ದಿಟ್ಟ ಭರವಸೆಯೊಂದಿಗೆ ಪುಟ್ಟ ಹೆಜ್ಜೆಗಳನ್ನಿಟ್ಟು ಶಾಲೆಯತ್ತ ಬಂದ ೧ನೇ ತರಗತಿಯ ಪುಟಾಣಿಗಳನ್ನು ಅಧ್ಯಾಪಕ ವೃಂದದವರು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತಂದರು. ನೂತನವಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರು ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕವನ್ನಿಟ್ಟು, ಸಿಹಿ ತಿನ್ನಿಸಿ ಎಂದು ಹರಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವರು ಕೃಷ್ಣ ಜೆ ಪಾಲೆಮಾರ್ ಮಾತನಾಡಿ, ಸಂಸ್ಕಾರಯುತ ಶಿಕ್ಷಣದ ಜೊತೆ ಮಕ್ಕಳು ಬೆಳೆಯಬೇಕು, ಕನ್ನಡ ಮಾಧ್ಯಮ ಶಾಲೆಗಳ ಪೈಕಿ ಈ ಸಂಸ್ಥೆ ವಿಶ್ವ ಮಟ್ಟದಲ್ಲಿ ಬೆಳೆದು ನಿಂತಿದೆ. ಒಳ್ಳೆಯ ಪ್ರಜೆಯಾಗಬೇಕಾದರೆ ವಿದ್ಯೆ ಕೊಡುವಂತ ಪದ್ಧತಿ ಬೆಳೆಯಬೇಕು. ಇಂತಹ ವಿದ್ಯಾಸಂಸ್ಥೆ ಬೆಳೆಯಬೇಕಾದರೆ ಪರಿಶ್ರಮದ ಅಗತ್ಯವಿದೆ ಎಂದರು.

ಈ ಸಂಧರ್ಭದಲ್ಲಿ ಮಂಗಳೂರು ವಿಕಾಸ್ ಎಜುಕೇಶನ್ ಟ್ರಸ್ಟ್ ನ ಸೂರಜ್ ಕುಮಾರ್ ಕಲ್ಯ, ಕೆರಾಡಿ ವರಸಿದ್ಧಿವಿನಾಯಕ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ಸುನೀಲ್ ಚಿತ್ತಾಲ್, ಬೆಂಗಳೂರು ಶ್ರೀ ಸರಸ್ವತಿ ಶಿಶುಮಂದಿರ ಸರ್ಜಾಪುರ ಮುಖ್ಯಶಿಕ್ಷಕರಾದ ವಿನುತ, ಶ್ರೀರಾಮ ವಿದ್ಯಾಕೆಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್ , ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು, ಆಡಳಿತ ಮಂಡಳಿಯ ಸದಸ್ಯರು, ಮಾತೃಭಾರತಿ ಸಮಿತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸುಧನ್ವ ಕಾಮತ್ ಸ್ವಾಗತಿಸಿ, ಭೂಮಿಕಾ ವಂದಿಸಿದರು.ತನ್ವಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
