ಗುರುಪುರ : ಕೈಕಂಬ ಜಂಕ್ಷನ್‌ನಲ್ಲಿ ಮೊದಲ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿದೆ. ಇಲ್ಲಿನ ಸರ್ವಿಸ್ ರೋಡ್ ಅಕ್ಷರಶಃ ಕಿರು ಹೊಳೆಯಂತಾಗಿದ್ದು, ಸಾರ್ವಜನಿಕರು ಅತ್ತಿಂದಿತ್ತ ಹೋಗಲು ಮಳೆ ಕಡಿಮೆಯಾಗುವವರೆಗೆ ಕಾಯುವಂತಾಯಿತು. ಎಲ್ಲಿ ನೋಡಿದಲ್ಲಿ ಕೆಸರು ನೀರು ಆವೃತಗೊಂಡಿದೆ. ಘನ ವಾಹನಗಳ ಓಡಾಟಕ್ಕೆ ರಸ್ತೆಯೇ ಕಂಬಳದ ಕರೆಯಂತಾಗಿದೆ.

ಇಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ನೆರೆ ಉಂಟಾಗಿದೆ. ಮಳೆಗಾಲಕ್ಕೆ ಮುಂಚೆಯೇ ಹೆದ್ದಾರಿ ಪಕ್ಕ ಚರಂಡಿ ನಿರ್ಮಿಸುತ್ತಿದ್ದರೆ ಇಂತಹ ಎಡವಟ್ಟು ಆಗುತ್ತಿರಲಿಲ್ಲ. ಕೈಕಂಬದಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಗುರುಪುರ-ಕೈಕಂಬ ನಾಗರಿಕ ಹಿತರಕ್ಷಣಾ ಸಮಿತಿ ಹೋರಾಟ ನಡೆಸುತ್ತಲೇ ಬಂದಿದ್ದರೂ ಜಿಲ್ಲಾಡಳಿತ ಮಾತ್ರ ಮನವಿಗೆ ಸ್ಪಂದಿಸಿಲ್ಲ.

ಕೈಕಂಬದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಿಸಿಲ್ಲ. ಇಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದೇವೆ, ಪ್ರಯೋಜನವಾಗಿಲ್ಲ. ಹೋರಾಟ ಫಲವಾಗಿ ಇಲ್ಲೊಂದು ಅಂಡರ್‌ಪಾಸ್ ನಿರ್ಮಿಸಲಾಗುತ್ತಿದೆ. ಮಳೆ ನೀರು ಅಂಗಡಿಗಳಿಗೆ ನುಗ್ಗಿದೆ. ಕೆಲವರಿಗೆ ಅಪಾರ ನಷ್ಟ ಉಂಟಾಗಿದೆ. ಸದ್ಯ ಕೈಕಂಬಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯ ಅವಲೋಕಿಸಬೇಕು” ಎಂದು ಸಮಿತಿಯ ಪದಾಧಿಕಾರಿ ಹಾಗೂ ಕಂದಾವರ ಪಂಚಾಯತ್ ಮಾಜಿ ಅಧ್ಯಕ್ಷೆ ವಿಜಯಾ ಜಿ. ಸುವರ್ಣ ಮನವಿ ಮಾಡಿದ್ದಾರೆ.

