ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಪೇಟೆ ಸಹಿತ ಹಲವೆಡೆ ಬುಧವಾರ ಸಂಜೆ ದಿಢೀರನೆ ಕಾಣಿಸಿಕೊಂಡ ಮಿಂಚು -ಗುಡುಗು ಸಹಿತ ಭಾರೀ ಗಾಳಿ ಮಳೆಗೆ ಸೋರ್ನಾಡು ಎಂಬಲ್ಲಿ ಕಿರು ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಚಿಸಲಾಗಿದ್ದ ಪರ್ಯಾಯ ರಸ್ತೆ ನೆರೆಗೆ ಕೊಚ್ಚಿ ಹೋದ ಪರಿಣಾಮ ರಾತ್ರಿಯಿಡೀ ಬಂಟ್ವಾಳ-ಮೂಡುಬಿದ್ರೆ ರಸ್ತೆ ಸಂಪರ್ಕ ಸ್ಥಗಿತಗೊಂಡ ಘಟನೆ ನಡೆದಿದೆ.
ಕಳೆದ ಎರಡು ವಾರಗಳ ಹಿಂದೆಯಷ್ಟೇ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು, ಕಂಚಿಕಾರಕೋಡಿ, ಕಾಂಜಿಲ ಹಾಗೂ ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದ್ದರು.
11btl-sornad
ಸರ್ಕರದ ಅಪೆಂಡಿಕ್ಸ್ ಇ ಯೋಜನೆಯಡಿ ರೂ 40ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೋರ್ನಾಡು ಸೇತುವೆ ನಿರ್ಮಾಣ ಕಾಮಗಾರಿಗೆ ಮರುದಿನವೇ ಚಾಲನೆ ದೊರೆತಿತ್ತು. ಗುತ್ತಿಗೆದಾರ ಪ್ರೇಮನಾಥ್ ಅವರು ಮುಂಬರುವ ಮಾರ್ಚ್  ತಿಂಗೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಉತ್ಸಾಹ ಹೊಂದಿದ್ದು, ಗುದ್ದಲಿಪೂಜೆ ಮರುದಿನವೇ ತಾತ್ಕಾಲಿಕವಾಗಿ ಪಯರ್ಾಯ ರಸ್ತೆ ನಿರ್ಮಿಸಲು ಆರಂಭಿಸಿ ಬಳಿಕ ಹಳೆ ಸೇತುವೆ ಕೆಡವಿ ಹಾಕಿದ್ದರು. ಇದೀಗ ಅಕಾಲಿಕವಾಗಿ ಕಾಣಿಸಿಕೊಂಡ ಭಾರೀ ಮಳೆಗೆ ಪರ್ಯಾಯ ರಸ್ತೆ ಹಾನಿಗೀಡಾಗಿದ್ದು, ಸುಮಾರು ರೂ 1ಲಕ್ಷಕ್ಕೂ ಮಿಕ್ಕಿ ಮೊತ್ತದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ದಿಢೀರ್ ಮಳೆಯಿಂದಾಗಿ ಬುಧವಾರ ಸಂಜೆ ವೇಳೆ ಕೆಲಸ ಮುಗಿಸಿ ರಾಯಿ, ಕೊಯಿಲ, ಸಿದ್ಧಕಟ್ಟೆ, ಸಂಗಬೆಟ್ಟು, ಆಲಂಗಾರು, ತಾಕೊಡೆ, ಮೂಡುಬಿದ್ರೆ ಮತ್ತಿತರ ಕಡೆಗೆ ಹೋಗುವ ನಿತ್ಯ ಪ್ರಯಾಣಿಕರು ವಾಹನ ಸಂಚಾರವಿಲ್ಲದೆ ಪರದಾಡುವಂತಾಗಿತ್ತು.
ಕೆಲವೊಂದು ವಾಹನಗಳು ಅನಿವಾರ್ಯವಾಗಿ ಬಂಡಸಾಲೆ, ಆಚಾರಿಪಲ್ಕೆ, ಪಂಜಿಕಲ್ಲು, ಅಣ್ಣಳಿಕೆ ಮಾರ್ಗವಾಗಿ ಬಳಿಕ ಮೂಡುಬಿದ್ರೆಗೆ ಸಂಚರಿಸಿದ್ದು, ಇದರಿಂದಾಗಿ ಹದಗೆಟ್ಟ ಇಲ್ಲಿನ ಕುಂಜರಬೆಟ್ಟು ರಸ್ತೆ ಬದಿ ರಾತ್ರಿ ವೇಳೆ ಸಂಚರಿಸುತ್ತಿದ್ದ ಶಿಕ್ಷಣ ಸಂಸ್ಥೆಗೆ ಸೇರಿದ ಖಾಸಗಿ ಬಸ್ಸೊಂದು ಕೆಸರಿನಲ್ಲಿ ಸಿಲುಕಿ ವಾಹನ ಸಂಚಾರಕ್ಕೆ ಅಲ್ಲಿಯೂ ಅಡ್ಡಿಯಾಗಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.
ತರಾತುರಿ ದುರಸ್ತಿ:
ಗುರುವಾರ ಬೆಳಿಗ್ಗೆಯಿಂದಲೇ ಗುತ್ತಿಗೆದಾರರು ಸಹಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ತಾತ್ಕಾಲಿಕ ರಸ್ತೆಗೆ ಮರಳು ಮತ್ತು ಜೆಲ್ಲಿ ಮಿಶ್ರಿತ ಗಟ್ಟಿ ಮಣ್ಣು ಹಾಕಿ ಮತ್ತೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಸೇತುವೆ ಕಾಮಗಾರಿ ತ್ವರಿತ ಮತ್ತು ಉತ್ತಮ ಗುಣಮಟ್ಟದಿಂದ ಕೂಡಿರಲಿ ಎಂಬ ಆಶಯ ಇಲ್ಲಿನ ಪ್ರಯಾಣಿಕರಿಂದ ವ್ಯಕ್ತವಾಗಿದೆ.

ಚಿತ್ರಗಳು: ಎಂ.ಕೆ.ಶ್ರೀಯಾನ್ ರಾಯಿ

By Suddi9

Leave a Reply

Your email address will not be published. Required fields are marked *