ಕೈಕಂಬ : ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಪೆರಾರ ಮತ್ತು ಮೂಡುಪೆರಾರ ಗ್ರಾಮಗಳಲ್ಲಿ ವಿದ್ಯುತ್, ರಸ್ತೆ, ತ್ಯಾಜ್ಯ ವಿಲೇವಾರಿ ಮತ್ತಿತರ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ಜು. 10 ರಂದು ನಡೆದ ಪಡುಪೆರಾರ ಗ್ರಾಮ ಪಂಚಾಯತ್ನ ೨೦೨೫-೨೬ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬಿರುಸಿನ ಚರ್ಚೆ ನಡೆಸಿದರು.

ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಉಗ್ಗಪ್ಪ ಮೂಲ್ಯ ಸ್ವಾಗತಿಸಿ, ಪ್ರಸಕ್ತ ಸಾಲಿನ ವರದಿ ಹಾಗೂ ವಾರ್ಡ್ ಸಭೆಗಳ ನಡಾವಳಿ ಓದಿದರು. ಬಳಿಕ ಗ್ರಾಮಸ್ಥರ ಪ್ರಶ್ನೆ, ಸಮಸ್ಯೆಗಳಿಗೆ ಪಂಚಾಯತ್ ಆಡಳಿತ ಹಾಗೂ ಇಲಾಖಾ ಅಧಿಕಾರಿಗಳು ಉತ್ತರಿಸಿದರು.
ಹಿಂದೆ ಬಜ್ಪೆ ವಿದ್ಯುತ್ ವಲಯ ವ್ಯಾಪ್ತಿಯಲ್ಲಿದ್ದ ನೀಲಕಣಿ ಪ್ರದೇಶವು ಈಗ ಮುಚ್ಚೂರು ವಲಯಕ್ಕೆ ಶಿಫ್ಟ್ ಆಗಿದ್ದು, ಪ್ರಸಕ್ತ ನೀಲಕಣಿಯಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಮುಚ್ಚೂರು ವಲಯದ ಸಿಬ್ಬಂದಿಯು ದೂರು ಸ್ವೀಕರಿಸುವುದಿಲ್ಲ. ಇದರಿಂದ ಈ ಭಾಗದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರೊಬ್ಬರು ದೂರಿದರು.
ಲೈನ್ಮ್ಯಾನ್ಗಳ ಕೊರತೆ ಇದೆ. ನೀಲಕಣಿ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ ಎಂದು ಮುಚ್ಚೂರು ಜೆಇ ಮತ್ತು ಬಜ್ಪೆ ಜೆಇ ಉತ್ತರಿಸಿದರು. ಮೂಡುಪೆರಾರ ಗ್ರಾಮದ ಮುರದಲ್ಲಿ ಆಗಾಗ್ಗೆ ವಿದ್ಯುತ್ ಸ್ಥಗಿತದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರೊಬ್ಬರು ದೂರಿದರು. ಮುರದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೈಕಂಬ ಜೆಇ ದೇವಿಪ್ರಸಾದ್ ಭರವಸೆ ನೀಡಿದರು.
ರಸ್ತೆ ಸಮಸ್ಯೆ :
ಪಡುಪೆರಾರ ಗ್ರಾಮದ ದೊಡ್ಡಪಲ್ಕೆ-ಕೊಂಪದವು ಮುಖ್ಯ ರಸ್ತೆಯ ದುಗ್ಗಲಚ್ಚಿಲ್-ನೆಲ್ಲಿಕಾಡು-ಕೊಳಪಿಲ ಮೂಲಕ ಮುಂಡಬೆಟ್ಟು ಸಂಪರ್ಕಿಸುವ ಕಚ್ಚಾ ರಸ್ತೆ ಹಾದು ಹೋಗಿರುವಲ್ಲಿ ಸರ್ಕಾರಿ ಜಾಗ ಒತ್ತವರಿ ಮಾಡಿರುವ ವ್ಯಕ್ತಿಯೊಬ್ಬರು ಒಂದು ಕಡೆ ಬೇಲಿ ಅಳವಡಿಸಿ ಸಾರ್ವಜನಿಕ ಸಂಪರ್ಕದ ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.
ಒತ್ತುವರಿ ಆಗಿರುವ ೨೩೦ ಸರ್ವೇ ನಂಬ್ರ ಜಾಗದಲ್ಲಿ ಹಾಕಿರುವ ಬೇಲಿ ತೆಗೆಯಲಾಗಿದೆ. ೭ ದಿನದೊಳಗೆ ಕಬ್ಬಿಣದ ಕಂಬಗಳ ತೆರವುಗೊಳಿಸಲು ಆ ವ್ಯಕ್ತಿಗೆ ಸೂಚಿಸಿದ್ದೇವೆ. ರಸ್ತೆ ನಿರ್ಮಿಸಲು ಹೇಳಿಕೊಳ್ಳುವ ಸಮಸ್ಯೆ ಇಲ್ಲ. ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಶೀಘ್ರ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆಯ ಗ್ರಾಮಕರಣಿಕ ದೇವರಾಜ್ ತಿಳಿಸಿದರೆ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಂಚಾಯತ್ ಪೂರ್ಣ ಸಹಕಾರ ನೀಡಲಿದೆ ಎಂದು ಪಿಡಿಒ ಉಗ್ಗಪ್ಪ ಮೂಲ್ಯ ಹೇಳಿದರು.
ಪಡುಪೆರಾರ ಗ್ರಾಮ ಪಂಚಾಯತ್ನಿAದ ಮೂಡುಪೆರಾರ ಗ್ರಾಮ ಪ್ರತ್ಯೇಕಿಸಿ, ಹೊಸ ಪಂಚಾಯತ್ ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಒಕ್ಕೊರಳಿನ ಬೇಡಿಕೆ ಇಟ್ಟರು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ನಿರ್ಣಯ ತೆಗೆದುಕೊಂಡು ಮೇಲಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಪಿಡಿಒ ಭರವಸೆ ನೀಡಿದರು.
ಗ್ರಾಮದಲ್ಲಿ ಹಸಿ ಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ವೈದಾಧಿಕಾರಿಗಳೇ ಇಲ್ಲ. ನಿರ್ವಹಣೆ ಕೊರತೆಯಿಂದ ಎರಡೂ ಗ್ರಾಮಗಳ ಕೆಲವೆಡೆ ದಾರಿದೀಪಗಳು ಮತ್ತು ಹೈಮಾಸ್ಟ್ ಉರಿಯುತ್ತಿಲ್ಲ. ಸುಂಕದಕಟ್ಟೆ ಜಂಕ್ಷನ್ ರಸ್ತೆ ಶೀಘ್ರ ದುರಸ್ತಿಯಾಗಬೇಕು.
ಮೂಡುಪೆರಾರದಲ್ಲಿ ಆರೋಗ್ಯ ಮಂದಿರ ಸ್ಥಾಪಿಸಬೇಕು. ಪಂಚಾಯತ್ಗೆ ಖಾಯಂ ಕಾರ್ಯದರ್ಶಿ, ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ, ಖಾಯಂ ವಿಎ ನೇಮಕವಾಗಬೇಕು ಎಂಬಿತ್ಯಾದಿ ಆಗ್ರಹಗಳು ಕೇಳಿ ಬಂದಿದ್ದು, ಗ್ರಾಮ ವ್ಯಾಪ್ತಿಯ ಬಹುತೇಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಂಚಾಯತ್ ಆಡಳಿತ ಸ್ಪಂದಿಸುತ್ತಿದೆ ಎಂದು ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಹೇಳಿದರು.
ಪಂಚಾಯತ್ ಉಪಾಧ್ಯಕ್ಷ ಜಯಂತ ಪೂಜಾರಿ, ಸದಸ್ಯರು, ಕಾರ್ಯದರ್ಶಿ(ಪ್ರಭಾರ) ಕಮಲಾಕ್ಷ ಎನ್, ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳೂರು ಇದರ ವಿಸ್ತರಣಾಧಿಕಾರಿ ಸಂಗಮೇಶ ಹೆಳವರ, ಅಬಕಾರಿ ನಿರೀಕ್ಷಕಿ ಸುಮಾ ಜಿ. ಎಂ, ಆರೋಗ್ಯ ಇಲಾಖೆಯ ಮುಮ್ತಾಝ್, ಕೃಷಿ, ತಾಪಂ ಇಂಜಿನಿಯರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಇತರ ಇಲಾಖಾ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
