ಕೈಕಂಬ : ರಾಷ್ಟ್ರೀಯ ಹೆದ್ದಾರಿ ೧೬೯ರ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿಯಲ್ಲಿ ಸುಮಾರು ೨೦ ಅಡಿ ಎತ್ತರಕ್ಕೆ ಹಾಕಲಾದ ಹೆದ್ದಾರಿ ಮಣ್ಣು ಕುಸಿದು ಒಂದೂವರೆ ಎಕ್ರೆ ಪ್ರದೇಶದಲ್ಲಿರುವ ಅಡಕೆ ತೋಟ ಹೆದ್ದಾರಿ ಸಂಪೂರ್ಣ ನಾಶವಾಗಿದ್ದು, ಕೃಷಿಕ ಕಂಗಾಲಾಗಿದ್ದಾರೆ.

ರವಿಶಂಕರ್ ರಾವ್ ನೂಯಿ ಅವರಿಗೆ ಸೇರಿದ ಅಡಕೆ ತೋಟ ಲೀಸ್‌ಗೆ ಪಡೆದುಕೊಂಡಿರುವ ತುಕಾರಾಮ ಪೂಜಾರಿ ಎಂಬವರು ತೋಟದಲ್ಲಿ ಅಡಕೆ, ಬಾಳೆ, ಕರಿಮೆಣಸು ಮತ್ತು ತೆಂಗಿನ ಕೃಷಿ ಮಾಡಿದ್ದಾರೆ. ಲಾಭದಾಯಕ ಫಸಲಿನ ಆಸೆಯಿಂದ ಈ ವರ್ಷ ತೋಟಕ್ಕೆ ಲಕ್ಷಾಂತರ ರೂ. ಗೊಬ್ಬರ ಸುರಿದಿದ್ದಾರೆ. ಮೊನ್ನೆಯಿಂದ ಸುರಿಯುತ್ತಿರುವ ಮುಸಲಧಾರೆಗೆ ಪಕ್ಕದ ಹೆದ್ದಾರಿ ಮಣ್ಣು ಕುಸಿದು, ಕೆಸರು ನೀರು ಹರಿದು ಒಟ್ಟು ೬ ಎಕ್ರೆ ಜಾಗದ ತೋಟದಲ್ಲಿ ಸುಮಾರು ಒಂದೂವರೆ ಎಕ್ರೆ ಜಾಗದಲ್ಲಿರುವ ಅಡಕೆ ತೋಟದ ೨೦ಕ್ಕೂ ಹೆಚ್ಚು ಮರಗಳು ಉರುಳಿವೆ ಅಥವಾ ಉಳಿದ ಮರಗಳು ಉಸಿರುಗಟ್ಟಿ ನಿಂತಿವೆ. ತೋಟದ ತುಂಬೆಲ್ಲ ಕೆಸರು ನೀರು, ಮಣ್ಣು ಜಮೆ ಆಗಿದ್ದು ಲಕ್ಷಾಂತರ ರೂ ನಷ್ಟವಾಗಿದೆ.

ಹೆದ್ದಾರಿಗೆ ಅಡ್ಡಲಾಗಿ ತೋಟದ ಭಾಗದಲ್ಲಿ ಮೋರಿ ಅಳವಡಿಸುವ ಪ್ರಕ್ರಿಯೆಗೆ ಪೂಜಾರಿ ಹಾಗೂ ಇತರರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಕ್ಷೇಪ ಲೆಕ್ಕಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್) ಬೃಹತ್ ಮೋರಿ ಅಳವಡಿಸಿದೆ. ಈಗ ಈ ಮೋರಿಯಲ್ಲಿ ಹೆದ್ದಾರಿಯ ಮತ್ತೊಂದು ಕಡೆಯ ಗುಡ್ಡದ ನೀರು ಹರಿದು ಬರುತ್ತಿದೆ. ಹೆದ್ದಾರಿಗೆ ಪಕ್ಕದಲ್ಲಿರುವ ಮನೆಯೊಂದು ಮಣ್ಣುಪಾಲಾಗುವ ಸಾಧ್ಯತೆ ಇದೆ.

“ತೋಟದ ಬದಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಅನಗತ್ಯವಾಗಿ ಮೋರಿ ಅಳವಡಿಸಲಾಗಿದೆ. ಇದರಿಂದ ನಮ್ಮ ಅಡಕೆ ತೋಟಕ್ಕೆ ಹೆದ್ದಾರಿ ಮಣ್ಣು ಜರಿದು ಲಕ್ಷಾಂತರ ರೂ ನಷ್ಟವಾಗಿದೆ. ತೋಟಕ್ಕೆ ಹಾಕಲಾದ ೩ ಲಕ್ಷ ರೂ ಮೌಲ್ಯದ ಗೊಬ್ಬರ ಕೊಚ್ಚಿ ಹೋಗಿದೆ. ಹಲವು ಅಡಕೆ ಮರಗಳು ಸತ್ತಿದ್ದರೆ, ಆಳೆತ್ತರಕ್ಕೆ ಕೆಸರು ಮಣ್ಣು ಜಮೆ ಆಗಿದ್ದು ಉಳಿದ ಮರಗಳಿಗೂ ಹಾನಿಯಾಗಿದೆ. ನಮಗಾದ ನಷ್ಟ ಎನ್‌ಎಚ್ ಕೊಡುತ್ತದೆಯೇ ? ಅಥವಾ ಕಂದಾಯ ಇಲಾಖೆ ಪರಿಹಾರ ನೀಡುತ್ತದೆಯೇ ?” ಎಂದು ತುಕಾರಾಮ ಪೂಜಾರಿ ಸಾದೂರು ಪ್ರಶ್ನಿಸಿದ್ದಾರೆ.

“ಅಭಿವೃದ್ಧಿ ಎಂದು ಹೇಳಿ ಬಡ ಕೃಷಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಗ್ರಾಮಸ್ಥರ ಮಾತು ದಿಕ್ಕರಿಸಿ ಮನಬಂದಂತೆ ಕಾಮಗಾರಿ ನಡೆಸಲಾಗಿದೆ. ಪರಿಣಾಮ ಈಗ ಬೆಳಕಿಗೆ ಬಂದಿದೆ. ನಷ್ಟ ಅನುಭವಿಸದ ಕೃಷಿಕರಿಗೆ ಪರಿಹಾರ ನೀಡಬೇಕು. ನೂಯಿಯಲ್ಲಿ ಹೆದ್ದಾರಿ ಕಾಮಗಾರಿಯಿಂದ ಸುಮಾರು ೧೨ ಎಕ್ರೆ ಕಂಗು, ತೆಂಗು, ಬಾಳೆ, ಕರಿಮೆಣಸು, ಭತ್ತದ ಕೃಷಿಗೆ ತೊಂದರೆ ಎದುರಾಗಿದೆ. ಹೆದ್ದಾರಿ ಮಣ್ಣು ಕುಸಿತ ತಡೆಯಲು ತಡೆಗೋಡೆಯೊಂದೇ ಪರಿಹಾರ” ಎಂದು ಗುರುಪುರ ಪಂಚಾಯತ್‌ನ ಸ್ಥಳೀಯ ನೂಯಿ ವಾರ್ಡ್ ೪ರ ಸದಸ್ಯ ಹರೀಶ್ ಬಳ್ಳಿ ಹೇಳಿದರು.

ಹೆದ್ದಾರಿ ಬಿರುಕಿಗೆ ತೇಪೆ :

ಅಡ್ಡೂರು-ನೂಯಿ ಭಾಗದಲ್ಲಿ ಡಾಮರು ಅಳವಡಿಸಲಾದ ಹೆದ್ದಾರಿ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟು, ಮನೆಗೆ ಅಪಾಯ ಉಂಟಾಗಿದೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅವರು ನೀಡಿದ ನಿರ್ದೇಶನದಂತೆ ಗುತ್ತಿಗೆ ಕಂಪೆನಿ ಡಿಬಿಎಲ್ ಸೋಮವಾರವೇ ಬಿರುಕು ಬಿಟ್ಟ ಕಡೆಯಲ್ಲಿ ಜಲ್ಲಿ ತುಂಬಿಸಿ ತೇಪೆ ಹಾಕಿದೆ. ಹೆದ್ದಾರಿಯ ಉದ್ದಕ್ಕೂ ತಡೆಗೋಡೆ ನಿರ್ಮಿಸಿದಲ್ಲಿ ಮಾತ್ರ ಮಣ್ಣು ಕುಸಿತ ತಡೆ ಸಾಧ್ಯ ಎಂದು ಸ್ಥಳೀಯರು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *