ಉಳ್ಳಾಲ: ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಲಾರಿಗೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಪರಿಣಾಮ ಹಿಂಬದಿ ಸವಾರ ತಮಿಳ್ನಾಡು ಮೂಲದ ಶರವಣ(28) ದಾರುಣ ಬಲಿಯಾದ ಘಟನೆ ಇಲ್ಲಿನ ಮದನಿ ನಗರ ಎಂಬಲ್ಲಿ ಸೋಮವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಸಂಭವಿಸಿದೆ.
ಘಟನೆಯ ವಿವರ: ಶರವಣ ತನ್ನ ಸ್ನೇಹಿತನ ಜೊತೆಯಲ್ಲಿ ಪಲ್ಸರ್ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಮದನಿ ನಗರ ಸಮೀಪ ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಘಟನೆ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದಾತ ಗಂಭೀರ ಗಾಯಗೊಂಡರೆ ಶರವಣ ರಸ್ತೆಗೆಸೆಯಲ್ಪಟ್ಟು ಆತನ ದೇಹದ ಮೇಲೆ ಟಿಪ್ಪರ್ ಚಲಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಶರವಣ ಉಳ್ಳಾಲದಲ್ಲಿ ಉಳಿದುಕೊಂಡು ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಎನ್ನಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಅಪಘಾತದ ರಭಸಕ್ಕೆ ಶರವಣ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗುರುತು ಸಿಗದಂತಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
