ಮಂಗಳೂರು: ಜಿಲ್ಲೆಯ ನಾನಾ ಕಡೆ ನಡೆಯುತ್ತಿರುವ ಗಲಭೆ, ಘರ್ಷಣೆಯ ಮುಂದುವರಿದ ಭಾಗವೆಂಬಂತೆ ಸೋಮವಾರ ಮಧ್ಯಾಹ್ನ ನಗರದ ಕುಂಜತ್ತಬೈಲ್ ಎಂಬಲ್ಲಿ ಕೋಳಿ ವ್ಯಾಪಾರಿಯ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಕುಂಜತ್ತಬೈಲ್ ನಿವಾಸಿ ಶರೀಫ್(38) ಹಲ್ಲೆಗೊಳಗಾದವರು.
ಶರೀಫ್ ಅಂಗಡಿಯಲ್ಲಿದ್ದ ಸಂದರ್ಭ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಯುವಕರು ಏಕಾಏಕಿ ಶರೀಫ್ ಮೇಲೆ ಹರಿತವಾದ ಚೂರಿಯಿಂದ ದಾಳಿ ನಡೆಸಿದ್ದಾರೆ. ಶರೀಫ್ ಜೊತೆಗಿದ್ದ ಇನ್ನೊಬ್ಬರು ದುಷ್ಕಮರ್ಿಗಳನ್ನು ತಡೆಯಲು ನೋಡಿದ್ದು, ಈ ವೇಳೆ ಅವರನ್ನು ದೂಡಿಹಾಕಿದ ಅಪರಿಚಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಶರೀಫ್ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶರೀಫ್ ಅವರಿಗೆ ತಮ್ಮ ಮೇಲೆ ದಾಳಿ ನಡೆಸಿದವರ ಬಗ್ಗೆ ಮಾಹಿತಿ ಇದೆ ಎನ್ನಲಾಗುತ್ತಿದ್ದು, ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಹಾಗೂ ಕಾವೂರು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆದಿತ್ಯವಾರ ರಾತ್ರಿ ಬಂದರು ಹಾಗೂ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಮಾಯಕರ ಮೇಲೆ ದಾಳಿ ನಡೆದಿದ್ದು, ಇದೀಗ ಮತ್ತೆ ನಗರದಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹಾಡಹಗಲೇ ದಾಳಿ ನಡೆದಿರುವುದು ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ.




