ಮಂಗಳೂರು: ಬಂಟ್ವಾಳ ತಾಲೂಕಿನ ಬಾಳ್ತಿಲ ದಾಸಕೋಡಿ ಎಂಬಲ್ಲಿ ಕಳೆದ 2013ರ ಫೆಬ್ರವರಿ ತಿಂಗಳಲ್ಲಿ ಅತ್ಯಾಚಾರಕ್ಕೆ ಪ್ರತಿರೋಧ ತೋರುವ ವೇಳೆ ದಾರುಣ ಕೊಲೆಯಾದ ಸೌಮ್ಯ(22)ಳ ಹಂತಕ ಸತೀಶ್(25) ಎಂಬಾತನನ್ನು ಜಿಲ್ಲಾ ಆರನೇ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದ್ದು, ಡಿ.5ರಂದು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳಲಿದೆ.

sowmya

ಫೆಬ್ರವರಿ 24, 2013ರಂದು ಆರೋಪಿ ಸತೀಶನು ಸೌಮ್ಯ ಬರುವ ದಾರಿಯಲ್ಲಿ ಕಾದು ಕುಳಿತು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದು, ಈ ವೇಳೆ ಆಕೆ ಪ್ರತಿರೋಧ ತೋರಿದ್ದಳು. ಆದರೆ ಆರೋಪಿ ಅಷ್ಟಕ್ಕೇ ಬಿಡದೆ ಆಕೆಯನ್ನು ರಸ್ತೆ ಪಕ್ಕದ ಗುಡ್ಡಕ್ಕೆ ಎಳೆದೊಯ್ದಿದ್ದು, ಈ ವೇಳೆ ಸೌಮ್ಯ ಈ ಬಗ್ಗೆ ಊರಲ್ಲಿ ಎಲ್ಲರಲ್ಲಿಯೂ ಹೇಳುವುದಾಗಿ ಬೆದರಿಕೆಯೊಡ್ಡಿದ್ದಳು. ತನ್ನ ಮಾನ ಹರಾಜಾಗುತ್ತದೆ ಎಂದು ಬೆದರಿದ ಆರೋಪಿ ಸೌಮ್ಯಳನ್ನು ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದ.

ಸೌಮ್ಯಳ ಕೈಯಲ್ಲಿದ್ದ ಟವೆಲ್, ಮೊಬೈಲ್ ಹಾಗೂ ಇತರ ಸೊತ್ತುಗಳು ರಸ್ತೆಬದಿ ಪತ್ತೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸಿದಾಗ ಆಕೆಯ ಮೃತದೇಹ ಕೆರೆಯ ಪಕ್ಕ ಪತ್ತೆಯಾಗಿತ್ತು. ಈ ವೇಳೆ ಸತೀಶನೂ ಸ್ಥಳದಲ್ಲಿದ್ದ. ಸ್ಥಳೀಯರ ಶಂಕೆಯ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಪಾತಕ ಕೃತ್ಯ ಬಯಲಾಗಿತ್ತು.

ಪ್ರಕರಣದಲ್ಲಿ 26 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ್ದು, ವೈದ್ಯಕೀಯ ಪರೀಕ್ಷೆ, ಪೊಲೀಸ್ ತನಿಖೆ ಎಲ್ಲದರಿಂದ ಆರೋಪಿಯು ತಪ್ಪಿತಸ್ಥ ಎನ್ನುವುದು ಸಾಬೀತಾಗಿದ್ದು, ಆರೋಪಿ ಸತೀಶನಿಗೆ ಡಿ.5ರಂದು ಶಿಕ್ಷೆ ಪ್ರಕಟಗೊಳ್ಳಲಿದೆ. ಸೌಮ್ಯ ಶಿಕ್ಷಕಿ ತರಬೇತಿಯನ್ನು ಪಡೆದು ಸಂಸಾರದ ಭಾರ ಹೊರುವಷ್ಟರಲ್ಲಿ ಕೊಲೆಯಾಗಿ ಹೋಗಿದ್ದು, ಆಕೆಯ ಕುಟುಂಬ ಇನ್ನೂ ಕಣ್ಣೀರು ಸುರಿಸುತ್ತಿದೆ.

By suddi9

Leave a Reply

Your email address will not be published. Required fields are marked *